ಕಲಾತ್ಮಕ ಚಿತ್ರಗಳಿಗೂ ಕಾಮಕ್ಕೂ ಮೊದಲಿನಿಂದಲೂ ಸಂಬಂಧ ಇತ್ತು. ಆದರೆ ಇತ್ತೀಚೆಗೆ ಅವುಗಳು ಒಂದಷ್ಟು ಕಡಿಮೆಯಾಗಿವೆ ಎನ್ನಬಹುದು. ಯಾಕೆಂದರೆ ಹಿಂದೆ ಕಾಮದ ಸಂಕೇತವಾಗಿದ್ದ ಗಂಡು ಹೆಣ್ಣಿನ ಅಪ್ಪುಗೆ, ಚುಂಬನ, ಹೊರಳಾಟ, ನರಳಾಟಗಳು ಇಂದು ಕಮರ್ಷಿಯಲ್ ಸಿನಿಮಾಗಳಲ್ಲೇ ಸಾಮಾನ್ಯ ಎನ್ನುವಂತಾಗಿದೆ! ಇಂಥ ಸಂದರ್ಭದಲ್ಲಿ
ನೈಜತೆಯ ಹೆಸರಲ್ಲಿ ಕಾಮದ ತುರುಕುವಿಕೆ ಯಾವ ಕಾರಣಕ್ಕೂ ಸಮರ್ಥನೀಯವಲ್ಲ. ಆದರೆ ಎರಡರ ಸಂಗಮವೆನ್ನುವಂತೆ ಬ್ರಿಜ್ ಸಿನಿಮಾ ಮಾದರಿಯಲ್ಲಿ ತೆರೆಕಂಡ ಹಿಂದಿಯ `ಡರ್ಟಿ ಪಿಕ್ಚರ್’ನಲ್ಲಿ ಸಿಲ್ಕ್ ಸ್ಮಿತಾಳ ಬದುಕು ಎನ್ನುವ ಹೆಸರಲ್ಲಿ ಒಂದಷ್ಟು ಹಸಿಬಿಸಿ ದೃಶ್ಯಗಳನ್ನು ತುರುಕಲಾಗಿತ್ತು. ಹಾಗೆ ಕಾಣಿಸಿಕೊಂಡಿದ್ದು ವಿದ್ಯಾ ಬಾಲನ್. ಈಗ ಲಿಪ್ ಕಿಸ್ ಮೂಲಕ ಸುದ್ದಿಯಾಗಿರುವ ನಿತ್ಯಾ ಮೆನನ್.

ನಿತ್ಯಾ ಮೆನನ್ ಹೆಸರು ಕೇಳಿದಾಕ್ಷಣ ಎಲ್ಲರೂ ಮಲಯಾಳಿ ಹುಡುಗಿ ಎಂದೇ ಅಂದುಕೊಂಡಿದ್ದಾರೆ. ಯಾಕೆಂದರೆ ಅವರ ಹೆಸರಿನ ಜತೆಯಲ್ಲೇ ಇರುವ ಮೆನನ್ ಎನ್ನುವ ಪದ ಆ ಭಾವನೆಯನ್ನು ಮೂಡಿಸುತ್ತದೆ. ಆದರೆ ಮಾತೃಭಾಷೆ ಮಲಯಾಳಂ ಹೌದಾದರೂ ನಿತ್ಯಾ ಹುಟ್ಟಿದ್ದು ಬೆಂಗಳೂರಿನಲ್ಲಿ. ಕನ್ನಡವನ್ನೇ ಕಲಿತು ಬೆಳೆದ ಕನ್ನಡತಿ ನಿತ್ಯಾ ಇದೀಗ ದೇಶದ ಎಲ್ಲ ಪ್ರಮುಖ ಭಾಷೆಗಳ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ನಟಿಸಿದ ಎಲ್ಲ ಚಿತ್ರಗಳಲ್ಲೂ ಪ್ರಾಮುಖ್ಯತೆ ಇರುವ ಪಾತ್ರಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಗ್ಲಾಮರ್‌ಗಿಂತ ನಟನೆಯ ಗ್ರಾಮರ್ ಮುಖ್ಯ ಎನ್ನುವಂತೆ ತನ್ನನ್ನು ಬಿಂಬಿಸಿಕೊಂಡಿದ್ದ ನಿತ್ಯಾ ಮೆನನ್ ಇದೀಗ ವೆಬ್ ಸೀರೀಸ್ ಒಂದರಲ್ಲಿ ಮೈ ಚಳಿ ಬಿಟ್ಟು ಲಿಪ್ ಕಿಸ್ ಮಾಡಿರುವುದು ಸಾಕಷ್ಟು ಸುದ್ದಿಯಾಗಿದೆ.

`ಬ್ರೀತ್ ಇನ್ ಟು ದಿ ಶಾಡೋಸ್’ ಹೆಸರಿನ ಈ ವೆಬ್ ಸೀರೀಸ್ ನಲ್ಲಿ ಅಭಿಷೇಕ್ ಬಚ್ಚನ್ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಮಾಯಾಂಕ್ ಶರ್ಮ ನಿರ್ದೇಶನದ ಈ ಧಾರಾವಾಹಿಯಲ್ಲಿ ನಿತ್ಯ ಮೆನನ್ ಲೆಸ್ಬಿಯನ್ ಪಾತ್ರ ನಿರ್ವಹಿಸಿದ್ದಾರೆ. ಇನ್ನೊಂದು ಮಹಿಳೆಯ ತುಟಿಗೆ ತುಟಿ ಬೆಸೆದು ಮುತ್ತು ಕೊಡುವ ಹಸಿಬಿಸಿಯ ದೃಶ್ಯವೊಂದು ಇದರಲ್ಲಿದ್ದು, ಆ ಕತ್ತರಿಸಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಇದು ಸದ್ಯಕ್ಕೆ ವೆಬ್ ಸೀರೀಸ್ ಗೆ ಒಳ್ಳೆಯ ಪ್ರಚಾರ ನೀಡಿದಂತಾಗಿರುವುದು ಸುಳ್ಳಲ್ಲ.

ನಿತ್ಯಾ ಮೆನನ್ ಗಾಸಿಪ್ ಗಳಿಗೆ ತಲೆ ಕೆಡಿಸಿಕೊಳ್ಳುವ ಜಾಯಮಾನದವಳಲ್ಲ. ಇತ್ತೀಚೆಗೆ ದೇಹದ ತೂಕ ಹೆಚ್ಚಿರುವ ಬಗ್ಗೆ ಕಮೆಂಟ್ಸ್ ಬಂದಾಗ ಆಕೆಯ ಪ್ರತಿಕ್ರಿಯೆ ಹೀಗಿತ್ತು. “ನಾನು ಹೇಗೆ ಇರಬೇಕು ಎನ್ನುವ ಕಲ್ಪನೆ ನನಗಿದೆ. ಇತರರಿಗೆ ಬೇಕಾಗಿ ನನ್ನ ದೇಹದ ಆಕಾರವನ್ನು ಬದಲಾಯಿಸಲಾರೆ. ದಪ್ಪಗಿದ್ದರೆ ಚೆಲುವಲ್ಲ ಎಂದವರು ಯಾರು? ದಪ್ಪಗಿದ್ದೇನೆ ಎನ್ನುವ ಕಾರಣಕ್ಕೆ ಅವಕಾಶಗಳು ಸಿಗದಿದ್ದರೆ ಸಿನಿಮಾ ಮಾಡದಿದ್ದರಾಯಿತು” ಎಂದಿದ್ದರು! ಹಾಗಾಗಿ ಇದು ಪಾತ್ರಕ್ಕಾಗಿ ಮಾಡಿರುವ ತ್ಯಾಗವಂತೂ ಆಗಿರಲಿಕ್ಕಿಲ್ಲ. ಬದಲಾಗಿ ಹೆಣ್ಣೊಬ್ಬಳ ತುಟಿಗೆ ತುಟಿ ಸೇರಿಸುವುದರಲ್ಲಿ ಮತ್ತು ಅದನ್ನು ಕಲೆಯಾಗಿ ಪ್ರದರ್ಶಿಸುವುದರಲ್ಲಿ ಆಕೆಗೆ ಯಾವುದೇ ತಪ್ಪುಗಳು ಗೋಚರಿಸದೇ ಇರಬಹುದು. ಅದಕ್ಕಾಗಿ ಒಪ್ಪಿದ್ದಾರೆ. ಆಕೆಯ ಅಭಿಮಾನಿಗಳು ಎಷ್ಟರ ಮಟ್ಟಿಗೆ ಒಪ್ಪಿದ್ದಾರೆ ಎನ್ನುವುದನ್ನು ಮುಂದಿನ ದಿನಗಳು ತಿಳಿಸಲಿವೆ.
ಶಶಿಕರ ಪಾತೂರು