ಬೆಂಗಳೂರು, ಮಾ. 27: ಕೊರೊನಾ ವಿಷಯಕ್ಕೆ ಸಂಬಂಧಿಸಿದಂತೆ ಅಂಕಿಅಂಶಗಳನ್ನು ಕೇಳುವುದು ಕೊರೊನಾ ಯೋಧರಿಗೆ ಮಾಡುವ ಅಪಮಾನ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕು, ಸಾವು, ಚಿಕಿತ್ಸೆಗೆ ಸಂಬಂಧಿಸಿದಂತೆ ಶ್ವೇತಪತ್ರ ಹೊರಡಿಸಬೇಕೆಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಸಚಿವ ಸುಧಾಕರ್, ನಮ್ಮ ಸರ್ಕಾರಕ್ಕೆ ಕೊರೊನಾ ಅಂಕಿ-ಅಂಶಗಳನ್ನ ಮುಚ್ಚಿಡುವ ಉದ್ದೇಶವೂ ಇಲ್ಲ ಅದರ ಅವಶ್ಯಕತೆಯೂ ಇಲ್ಲ. ಆದರೆ ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಕೇವಲ ರಾಜಕೀಯ ಲಾಭಕ್ಕಾಗಿ ಸುಳ್ಳು ಅಪಾದನೆಗಳನ್ನು ಮಾಡುವುದು ಸರಿಯಲ್ಲ. ಇದು ಕಳೆದ 1 ವರ್ಷದಿಂದ ಹಗಲಿರುಳು ಶ್ರಮಿಸುತ್ತಿರುವ ಕೊರೊನಾ ಯೋಧರಿಗೆ ಎಸಗಿರುವ ಅಪಮಾನ ಎಂದು ಟೀಕಿಸಿದರು.
ಅಲ್ಲದೇ, ಈ ಅಂಕಿ-ಅಂಶಗಳು ಇ-ಜನ್ಮ ತಂತ್ರಾಂಶದಲ್ಲಿ ತಾತ್ಕಾಲಿಕವಾಗಿ ದಾಖಲಿಸಲಾಗಿರುವ ದತ್ತಾಂಶವಾಗಿದ್ದು, ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಅವರು ಹೊರಡಿಸಿರುವ ಮಾರ್ಗಸೂಚಿಗಳ ಅನುಸಾರ ಪರಿಷ್ಕರಣೆ ನಡೆಯಬೇಕಿದೆ. ಈ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದ್ದು ಅಂತಿಮ ಅಂಕಿ-ಅಂಶಗಳ ಪ್ರಕಟಣೆ ಇನ್ನೂ ಬಾಕಿಯಿದೆ ಎಂದು ತಿಳಿಸಿದ್ದಾರೆ.