Bengaluru: ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗಿದ್ದು, ಗ್ರಾಮೀಣ ಭಾಗಗಳಿಗೆ ಇದರ ಪರಿಣಾಮ ತಟ್ಟಿದ್ದು ರೈತರಿಗೆ ಲೋಡ್ ಶೆಡ್ಡಿಂಗ್ ಶಾಕ್ (Load Shedding shock) ನೀಡಲಾಗಿದೆ. ಈಗಾಗಲೇ ಬರದ ಬವಣೆಗೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್ ಕೂಡಾ ಇಲ್ಲದೇ ಬೆಳೆಗಳಿಗೆ ನೀರುಣಿಸುವುದೇ ಸವಾಲಾಗಿದೆ. ಈಗಾಗಲೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಲೋಡ್ ಶೆಡ್ಡಿಂಗ್ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ.
ಮೂಲಗಳ ಪ್ರಕಾರ 3,000 ಮೆಗಾವ್ಯಾಟ್ ವಿದ್ಯುತ್ ಕೊರತೆ ಸರಿದೂಗಿಸಲು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಅದರ ಪರಿಣಾಮ ರೈತರ ಮೇಲಾಗುತ್ತಿದ್ದಯ, ಬೆಳೆಗಳಿಗೆ ಸರಿಯಾಗಿ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಡಿತ ಮಾಡಿ, ರಾಜಧಾನಿ ಬೆಂಗಳೂರಿಗೆ (Bengaluru) ಲೋಡ್ ಶೆಡ್ಡಿಂಗ್ ಬಿಸಿ ತಟ್ಟದಂತೆ ಪರಿಸ್ಥಿತಿ ನಿಭಾಯಿಸುತ್ತಿತ್ತು.
ಇನ್ನು ರಾಜ್ಯದಲ್ಲಿ ಸದ್ಯ 8,700 ಮೆಗಾವ್ಯಾಟ್ ವಿದ್ಯುತ್ಗೆ ಬೇಡಿಕೆಯಿದ್ದು, 5,300 ಮೆಗಾವ್ಯಾಟ್ ಪೂರೈಕೆಯಾಗುತ್ತಿದೆ. 3,000 ಮೆಗಾವ್ಯಾಟ್ನಷ್ಟು ಕೊರತೆ ನಿಭಾಯಿಸಲು ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ರಾಜ್ಯದ ಉಷ್ಣ ಸ್ಥಾವರಗಳಲ್ಲಿ ಉಂಟಾಗಿರುವ ತಾಂತ್ರಿಕ ದೋಷದಿಂದ ಕೆಲ ಘಟಕಗಳು ಸ್ಥಗಿತಗೊಂಡಿದ್ದರಿಂದ ಸರಾಸರಿ ಉತ್ಪಾದನೆಯಲ್ಲಿ ಇಳಿಕೆಯಾಗಿದೆ. ಇನ್ನೊಂದೆಡೆ ಮಳೆ ಕೊರತೆಯಿಂದಾಗಿ ಜಲವಿದ್ಯುತ್ ಉತ್ಪಾದನೆಯಲ್ಲೂ ಕುಸಿತ ಉಂಟಾಗಿದೆ.
ಇನ್ನ ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ (BJP), ಗೃಹಜ್ಯೋತಿ ಬೆಳಗುವ ಹೆಸರಲ್ಲಿ ಅಧಿಕಾರಕ್ಕೆ ಬಂದ ನಯವಂಚಕ ಸರ್ಕಾರ ರೈತರ ಪಾಲಿಗಂತೂ ಅಕ್ಷರಶಃ ಮೃತ್ಯುಕೂಪ. ಬಿಜೆಪಿ ಸರ್ಕಾರವಿದ್ದಾಗ ನಿರಂತರವಿದ್ದ ವಿದ್ಯುತ್ ಸಂಪರ್ಕವನ್ನು ಈಗ ಲೋಡ್ ಶೆಡ್ಡಿಂಗ್ ಮೂಲಕ ಮರೀಚಿಕೆ ಮಾಡಿರುವ ಸಿದ್ದರಾಮಯ್ಯ (Siddaramaiah) ಅವರ ಸರ್ಕಾರ ರೈತರಿಗೆ ವಿಷವುಣಿಸುವ ರಾಕ್ಷಸನ ಪ್ರತ್ಯಕ್ಷ ರೂಪ. ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲಗೊಂಡಿದ್ದಲ್ಲದೆ, ತನ್ನ ಮೈತ್ರಿಕೂಟದ ಮಿತ್ರರಿಗಾಗಿ ಕಾವೇರಿಯನ್ನೂ ಹರಿಯಲು ಬಿಟ್ಟ, ಸದಾ ಸ್ವಾರ್ಥ ಚಿಂತನೆಯ ಕಾಂಗ್ರೆಸ್ (Congress) ಕರ್ನಾಟಕ (Karnataka) ಇದುವರೆಗೆ ಕಂಡ ನಿಕೃಷ್ಟ ಸರ್ಕಾರ ಎಂದು ಟೀಕಿಸಿದೆ.