ನವದೆಹಲಿ, ಜೂ. 05: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಹಂತ ಹಂತವಾಗಿ ಲಾಕ್ಡೌನ್ ತೆರವುಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶನಿವಾರ ತಿಳಿಸಿದರು.
ಆ ಪ್ರಕಾರ, ಶೇ 50ರ ಪ್ರಯಾಣಿಕರೊಂದಿಗೆ ಮೆಟ್ರೊ ರೈಲು ಸಂಚಾರ ಮಾಡಲಿದೆ. ಶೇ 50ರಷ್ಟು ಹಾಜರಾತಿಯೊಂದಿಗೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳನ್ನು ತೆರಯಲು ಅವಕಾಶ ನೀಡಲಾಗುವುದು. ಬೆಳಿಗ್ಗೆ 10 ರಿಂದ ರಾತ್ರಿ 8ರವರೆಗೆ ಬೆಸ-ಸಮ ಆಧಾರದಲ್ಲಿ ಮಾರುಕಟ್ಟೆಗಳು ಮತ್ತು ಮಾಲ್ಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದು ಅವರು ವಿವರಿಸಿದರು.
ನಿತ್ಯ 37 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಜತೆಗೆ, ದೆಹಲಿಯ ಆಸ್ಪತ್ರೆಯಲ್ಲಿರುವ ಐಸಿಯುಗಳ ಲಭ್ಯತೆ ಮತ್ತು ಔಷಧಗಳ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರ ಕೊರೊನಾ ಮೂರನೇ ಅಲೆ ಎದುರಿಸಲು ದೆಹಲಿ ಸರ್ಕಾರ ಸಜ್ಜಾಗುತ್ತಿದೆ ಎಂದು ಹೇಳಿದರು.
ದೆಹಲಿಯಲ್ಲಿ 450 ಮೆಟ್ರಿಕ್ ಟನ್ ಆಮ್ಲಜನಕ ಸಂಗ್ರಹಿವಷ್ಟು ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ. 25 ಆಮ್ಲಜನಕ ಟ್ಯಾಂಕರ್ಗಳನ್ನು ಸರ್ಕಾರ ಖರೀದಿಸುತ್ತಿದೆ. 64 ಸಣ್ಣ ಆಮ್ಲಜನಕ ಘಟಕಗಳನ್ನು ಸ್ಥಾಪಿಸುತ್ತಿದೆ. ಕೋವಿಡ್ಗೆ ಚಿಕಿತ್ಸೆಗೆ ಸಂಬಂಧಿಸಿದ ಔಷಧಿಗಳ ದಾಸ್ತಾನು ಮಾಡುವುದಕ್ಕೂ ಗಮನ ಹರಿಸಲಾಗುವುದು ಎಂದು ಅವರು ತಿಳಿಸಿದರು