ಭಾರತೀಯ ಸಂಸ್ಕೃತಿಯಲ್ಲಿ ಯುಗಾದಿಯನ್ನು (Yugadi) ಹೊಸ ವರ್ಷವೆಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದವಸ, ಧಾನ್ಯಗಳನ್ನು ಬೆಳೆದ ಹೊಸ ಫಸಲನ್ನು ಮನೆಗೆ ತೆಗೆದುಕೊಂಡು ಹೋಗುವುದು ವಾಡಿಕೆ.
ಆದರೆ ಇದಕ್ಕೆ ತೀರಾ ಭಿನ್ನವಾಗಿ ಟಿಬೇಟಿಯನ್ನರ (Tibetians) ಆಚಾರ ವಿಚಾರಗಳಿವೆ.
ಟಿಬೇಟಿಯನ್ನರು ಹೊಸ ವರ್ಷವನ್ನು ಲೋಸಾರ್ ಎಂಬ ಹೆಸರಿನಿಂದ ಆಚರಿಸುತ್ತಾರೆ. ಇದು 15 ದಿನಗಳ ಕಾಲ ನಡೆಯುವ ಆಚರಣೆಯಾಗಿದ್ದು, ಹಲವಾರು ಆಚಾರ-ವಿಚಾರಗಳನ್ನು ಪಾಲಿಸಲಾಗುತ್ತದೆ.
ಲೋಸಾರ್ ಹಬ್ಬದಲ್ಲಿ ‘ಚಾಂಗ್’ ಎನ್ನುವ ಪಾನೀಯಕ್ಕೆ ಮುಖ್ಯ ಸ್ಥಾನವಿದೆ.
ಪ್ರತಿ ಟಿಬೇಟಿಯನ್ನರ ಮನೆಯಲ್ಲಿಯೂ ಗೋಧಿ ಹಾಗೂ ಬಾರ್ಲಿಯಿಂದ ಚಾಂಗ್ ತಯಾರಿಸುತ್ತಾರೆ. ಹಬ್ಬದ ಎರಡನೇ ದಿನವನ್ನು ಕಿಂಗ್ಸ್ ಲೋಸಾರ ಅಥವಾ ಗ್ಯಾಲ್ಪೋ ಲೋಸಾರ್ ಎಂದು ಕರೆಯುತ್ತಾರೆ.
ಇನ್ನು, ಲೋಸಾರ್ ಹಬ್ಬದ ಕೊನೆಯ ದಿನದ ಆಚರಣೆ ವಿಶಿಷ್ಟವಾಗಿದ್ದು, ವಿವಾದಗಳಿಗೂ ಕಾರಣವಾಗಿದೆ.
ಇದನ್ನೂ ಓದಿ : https://vijayatimes.com/sonia-gandhi-helped-fallen-girl/
ಹೌದು, ದವಸ ಧಾನ್ಯಗಳು ದೇವರಿಗೆ ಸಮಾನ ಎಂದು ಭಾರತೀಯರು ಅವುಗಳನ್ನು ಪೂಜಿಸುತ್ತಿರುವ ಸಂದರ್ಭದಲ್ಲಿ, ಟಿಬೇಟಿಯನ್ನರು (Losar Festival Of Tibetians) ಹೊಸ ವರ್ಷದ ಆಚರಣೆಯಲ್ಲಿ ಭೂತ, ಪ್ರೇತಗಳನ್ನು ಸಂತುಷ್ಟಗೊಳಿಸಲು ದವಸ, ಧಾನ್ಯ, ನಾಣ್ಯ, ಹಣವನ್ನು ಸುಡುವ ಸಂಪ್ರದಾಯ ಮುಂದುವರಿಸಿಕೊಂಡು ಬಂದಿರುವುದು ಆಶ್ಚರ್ಯ ಮೂಡಿಸುತ್ತದೆ.
ಟಿಬೇಟಿಯನ್ನರು ಹೊಸ ವರ್ಷದ 15 ದಿನಗಳ ಕಾರ್ಯಕ್ರಮದಲ್ಲಿ ಹಲವಾರು ಆಚಾರ-ವಿಚಾರಗಳನ್ನು (Losar Festival Of Tibetians) ಪಾಲಿಸುವ ಜೊತೆಗೆ ಕೊನೆಯ ಹಂತದಲ್ಲಿ ದುಷ್ಟಶಕ್ತಿಗಳಿಂದ ಯಾವುದೇ ತೊಂದರೆಯಾಗದಿರಲಿ ಎಂದು ಈ ರೀತಿ ದವಸ, ಧಾನ್ಯಗಳನ್ನು ಸುಡುತ್ತಾರಂತೆ.
ಲೋಸಾರ್ ಹಬ್ಬದ ಅಂಗವಾಗಿ ಮನೆಯನ್ನು ಸುಣ್ಣ, ಬಣ್ಣಗಳಿಂದ ಸಿಂಗರಿಸಲಾಗುತ್ತದೆ.
ಗೋಡೆಗಳ ಮೇಲೆ ಸೂರ್ಯ, ಚಂದ್ರ ಇತ್ಯಾದಿ ಶುಭಸೂಚಕಗಳ ಚಿಹ್ನೆಗಳನ್ನು ಬಿಡಿಸುವುದು ಸಂಪ್ರದಾಯ. ಹೊಸ ಬಟ್ಟೆಯೊಂದಿಗೆ ಸುವಾಸನೆಯುಕ್ತ ಹೂವುಗಳು, ಹಣ್ಣು-ಹಂಪಲು,
ಕರಿದ ತಿನಿಸುಗಳು, ಚಾಂಗ್, ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳು ಹಬ್ಬದಲ್ಲಿ ಪ್ರಮುಖವಾಗಿರುತ್ತವೆ.
ಹಬ್ಬದ ಮುನ್ನಾ ದಿನ ಇಲ್ಲಿನ ಗಾಡೆನ್ ಜಾಂಗತ್ಸೆ ಬೌದ್ಧ ಮಂದಿರದಲ್ಲಿ ಸಂಜೆಯಿಂದ ಬೆಳಿಗ್ಗೆವರೆಗೆ ಪಾಲ್ಡೆನ್ ಲ್ಹಾಮು ಫುನಸ್ತೋಕ್ ಎಂಬ ವಿಶೇಷ ಪೂಜೆ ನಡೆಯುತ್ತದೆ. ಇದರಲ್ಲಿ ಒಂಬತ್ತು ಬೌದ್ಧ ಮಂದಿರಗಳ ಪ್ರಮುಖರು, ಕ್ಯಾಂಪ್ ಮುಖಂಡರು, ಬಿಕ್ಕುಗಳು ಪಾಲ್ಗೊಳ್ಳುತ್ತಾರೆ.
ಇದನ್ನೂ ಓದಿ : https://vijayatimes.com/followed-weird-marriage-traditions/
ಟಿಬೆಟನ್ನರು ‘ತಾಶಿ ಡೆಲೆಕ್’ ಎಂದರೆ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಕೊನೆಯ ದಿನ ವಿಶೇಷ ಪೂಜೆ ಸಲ್ಲಿಸುವ ಮೂಲಕ ವರ್ಷದ ಎಲ್ಲ ಅಶುಭ ಸಂಕೇತಗಳನ್ನು ಸುಟ್ಟು ಹಾಕುವ ಕಾರ್ಯಕ್ರಮವಾಗಿರುತ್ತದೆ.
ಮನುಷ್ಯರಿಗೆ ಅಷ್ಟೇ ಅಲ್ಲದೇ ಜಾನುವಾರುಗಳಿಗೆ ಯಾವುದೇ ರೋಗಗಳು ಬರದಂತೆ, ಪ್ರಕೃತಿ ವಿಕೋಪಗಳು ಬಾರದಂತೆ ಮತ್ತು ಉತ್ತಮ ರಾಜಕೀಯ ಬೆಳವಣಿಗೆಯ ಸಲುವಾಗಿ ಈ ಸಂದರ್ಭದಲ್ಲಿ ದೇವರಲ್ಲಿ ಬೇಡಿಕೊಳ್ಳಲಾಗುತ್ತೆ.
- ಪವಿತ್ರ