‘ಸೈಕೊ’ ಖ್ಯಾತಿಯ ನಿರ್ದೇಶಕ ವಿ.ದೇವದತ್ತ ಮತ್ತೊಂದು ಹೊಸ ಚಿತ್ರದ ಕೆಲಸದಲ್ಲಿ ನಿರತರಾಗಿದ್ದಾರೆ. ಶ್ರೀ ವೆಂಕಟೇಶ್ವರ ಇಂಟರ್ ನ್ಯಾಷನಲ್ ಎನ್ನುವ ಸಂಸ್ಥೆಯಡಿಯಲ್ಲಿ ನಿರ್ಮಾಪಕ ರವಿಕಿರಣ್ ಬಿ. ಕೆಯವರ ಜೊತೆ ಸೇರಿ “ಲವ್ ಮಿ ಆರ್ ಹೇಟ್ ಮಿ” ಎಂಬ ಕನ್ನಡ ಚಲನಚಿತ್ರವನ್ನು ನಿರ್ದೇಶಿಸಲು ಅಣಿಯಾಗಿದ್ದಾರೆ. ವಿಚಿತ್ರ ಏನೆಂದರೆ ಈ ಶೀರ್ಷಿಕೆ ವಿಚಾರದಲ್ಲಿ ಅವರಿಗೆ ಹೊಸದೊಂದು ಸಮಸ್ಯೆ ಎದುರಾಗಿದೆ.
ನಿರ್ದೇಶಕರು ನೀಡಿರುವ ಹೇಳಿಕೆಯಂತೆ, “ಹೊಸ ಚಿತ್ರದ ಚಿತ್ರೀಕರಣಕ್ಕೆ ಸಂಬಂಧ ಪಟ್ಟಂತೆ ತಯಾರಿಯಲ್ಲಿ ಇರುವಾಗ ಕೋವಿಡ್ ಸಮಸ್ಯೆ ಕಾರಣ ಉಂಟಾದ ಲಾಕ್ಡೌನ್ ನಿಂದಾಗಿ ಚಿತ್ರೀಕರಣವನ್ನು ಮುಂದೂಡಬೇಕಾಯಿತು. ಈ ಸಂದರ್ಭದಲ್ಲಿ “ಆಕ್ಷನ್ ಕಟ್ ಎಂಟರ್ಟೈನ್ಮೆಂಟ್ ” ಎಂಬ ಬ್ಯಾನರ್ ಅಡಿಯಲ್ಲಿ ದೀಪಕ್ ಗಂಗಾಧರ್ ರವರು ನಟರಾದ ಡಾರ್ಲಿಂಗ್ ಕೃಷ್ಣ ಹಾಗೂ ರಚಿತಾ ರಾಮ್ ಅಭಿನಯದಲ್ಲಿ “ಲವ್ ಮಿ ಆರ್ ಹೇಟ್ ಮಿ” ಎಂಬ ನಮ್ಮ ಸಂಸ್ಥೆಯ ಶೀರ್ಷಿಕೆಯಡಿಯಲ್ಲಿ ಕನ್ನಡ ಚಿತ್ರವನ್ನು ನಿರ್ಮಾಣ ಮಾಡ ಹೊರಟಿದ್ದಾರೆ. ಈ ಶೀರ್ಷಿಕೆಯು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಯಲ್ಲಿ ತಮ್ಮ ಸಂಸ್ಥೆಯ ಹೆಸರಿನಲ್ಲಿ ದಿನಾಂಕ: 30-11-2020 ರಂದು ನೋಂದಾವಣೆಗೊಂಡಿದ್ದು ತತ್ಸಂಬಂಧ ಅನುಮತಿಯನ್ನು ಪಡೆದಿರುತ್ತೇವೆ ಹಾಗೂ ಈ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಯಿಂದ ದಿನಾಂಕ 04-01-2021 ರಂದು ಸೂಕ್ತ ಅನುಮತಿಯನ್ನು ಪಡೆದಿರುತ್ತೇವೆ. ಲಾಕ್ ಡೌನ್ ಮುಗಿದ ನಂತರ ಈ ಚಿತ್ರಕ್ಕೆ ಸಂಬಂದ ಪಟ್ಟ ಪ್ರಕಟಣೆಗಳನ್ನು ಮಾಧ್ಯಮಗಳಿಗೆ ನೀಡಿ ಪ್ರಚಾರವನ್ನು ಪ್ರಾರಂಭಿಸಬೇಕೆಂಬ ಯೋಜನೆಯಲ್ಲಿರುವಾಗ ಈ ಘಟನೆ ನಡೆದಿರುತ್ತದೆ”.
ಈ ಎಲ್ಲ ವಿಚಾರಕ್ಕೆ ಸ್ಪಷ್ಟನೆಯನ್ನು ನೀಡುತ್ತಾ ಸಂಬಂಧಪಟ್ಟ ಸೂಕ್ತ ದಾಖಲೆಗಳನ್ನು ಮಾಧ್ಯಮದ ಅವಗಾಹನೆಗಾಗಿ ನೀಡುತ್ತಿದ್ದೇವೆ ಹಾಗೂ ತಮ್ಮಿಂದ ಸೂಕ್ತ ಸಹಕಾರವನ್ನು ಬಯಸುತ್ತಿದ್ದೇವೆ ಎಂದು ನಿರ್ದೇಶಕ ದೇವದತ್ತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.