ಮೈಸೂರು, ಮಾ. 17: ಫೇಸ್ಬುಕ್ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ಯುವಕರನ್ನು ಪ್ರೀತಿಸುವುದಾಗಿ ಯಾಮಾರಿಸಿ ಲಕ್ಷಾಂತರ ರೂಪಾಯಿ ಹಣ, ಆಭರಣ ಲಪಟಾಯಿಸಿದ್ದ ಖತರ್ನಾಕ್ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.
ಮೇಘ (25) ಬಂಧಿತ ಯುವತಿ. ಫೇಸ್ಬುಕ್ನಲ್ಲಿ ʻಚಿನ್ನುಗೌಡ ಚಿನ್ನುಗೌಡʼ ಹೆಸರಿನಲ್ಲಿ ಪ್ರೊಫೈಲ್ ಸೃಷ್ಟಿಸಿರುವ ಈಕೆ, ರವಿ ಎಂಬಾತನಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾಳೆ. ರಿಕ್ವೆಸ್ಟ್ ಅಕ್ಸೆಪ್ಟ್ ಆಗಿ ಇಬ್ಬರೂ ನಂಬರ್ ಪರಸ್ಪರ ಹಂಚಿಕೊಂಡಿದ್ದಾರೆ. ನಂತರ ತನ್ನ ಹೆಸರು ಬಿಂದು ಗೌಡ ಎಂದು ಸುಂದರವಾದ ಹುಡುಗಿಯರ ಫೋಟೋಗಳನ್ನು ತನ್ನದೇ ಫೋಟೊ ಎಂದು ಪರಿಚಯಿಸಿಕೊಂಡಿದ್ದಾಳೆ.
ನನ್ನ ತಂದೆ ಶ್ರೀಮಂತ. ವಿಜಯನಗರದಲ್ಲಿ 2 ಪೆಟ್ರೋಲ್ ಬಂಕ್, ಬಾರ್ ಇಟ್ಟಿದ್ದಾರೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದು, ಮದುವೆಯಾಗಬೇಕು ಎಂಬ ಆಸೆ ಇದೆ. ನಿನ್ನ ಹುಟ್ಟು ಹಬ್ಬಕ್ಕೆ 45 ಲಕ್ಷ ರೂ. ಮೌಲ್ಯದ ಫಾರ್ಚುನರ್ ಕಾರು ಕೊಡಿಸುತ್ತೇನೆ. ಅದನ್ನು ಕೊಂಡುಕೊಳ್ಳಲು 1 ಲಕ್ಷ ರೂ. ಹಣ ಕಡಿಮೆ ಇದೆ. ಅದನ್ನು ನನ್ನ ಸ್ನೇಹಿತನ ಕೈಗೆ ನೀನು ಕೊಟ್ಟು ಕಳುಹಿಸು ಎಂದು ನಂಬಿಸಿದ್ದಾಳೆ.
ನಂತರ ಯುವಕನ ತಾಯಿಯನ್ನು ಪರಿಚಯ ಮಾಡಿಕೊಂಡು ಅವರ ಕತ್ತಿನಲ್ಲಿದ್ದ ಸರ ತುಂಬಾ ಇಷ್ಟಾ ಆಗಿದೆ ಎಂದು ಹೇಳಿದ್ದಾಳೆ. ನಿಮ್ಮ ಮನೆಯಲ್ಲಿರುವ ಆಭರಣಗಳನ್ನು ನನ್ನ ಸ್ನೇಹಿತನಿಗೆ ಕೊಟ್ಟು ಕಳುಹಿಸಿ. ಅದೇ ರೀತಿಯ ಡಿಸೈನ್ ಒಡವೆಗಳನ್ನು ಮಾಡಿಸಿಕೊಂಡು ನಿಮ್ಮ ಒಡವೆಗಳನ್ನು ವಾಪಸ್ ಕೊಡುತ್ತೇನೆಂದು ನಂಬಿಸಿ ಯಾಮಾರಿಸಿದ್ದಾಳೆ. ಸುಮಾರು 450 ಗ್ರಾಂ ಒಡವೆಗಳನ್ನು ಪಡೆದು ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾಳೆ. ಈ ಸಂಬಂಧ ಯುವಕ ಮೇಟಗಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ನಂತರ ಪೊಲೀಸರು ಆರೋಪಿ ಬಿಂದುಗೌಡಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಲವಾರು ಯುವಕರನ್ನು ಇದೇ ರೀತಿ ಯಾಮಾರಿಸಿ ಲಕ್ಷಾಂತರ ಹಣ ಲಪಟಾಯಿಸಿರುವುದು ಬೆಳೆಕಿಗೆ ಬಂದಿದೆ. 2018ನೇ ಸಾಲಿನಲ್ಲಿ ಯೋಗಾನಂದ ಎಂಬ ಯುವಕನಿಗೂ 15 ಲಕ್ಷ ರೂ. ವಂಚಿಸಿದ್ದಾಳೆ. ಅಲ್ಲದೇ, ಶ್ರೀನಿವಾಸ್ ಎಂಬಾತನಿಂದ 9.70 ಲಕ್ಷ ರೂ. ವಂಚಿಸಿದ್ದಾಳೆ.