ನವದೆಹಲಿ ನ 01 : ಬೆಲೆ ಏರಿಕೆಯಿಂದ ಈಗಾಗಲೇ ಗ್ರಾಹಕರ ಜೇಬು ಸುಡುತ್ತಿದೆ. ಇದೀಗ ದೀಪಾವಳಿಗೂ ಮುನ್ನ ಮತ್ತೆ ಬೆಲೆ ಏರಿಕೆ ಶಾಕ್ (LPG Price Hike) ಗ್ರಾಹಕರಿಗೆ ಎದುರಾಗಿದೆ. ನವೆಂಬರ್ ಮೊದಲ ದಿನವೇ ಪೆಟ್ರೋಲಿಯಂ ಕಂಪನಿಗಳು ಗ್ಯಾಸ್ ಬೆಲೆಯನ್ನು ಏರಿಸಿದೆ. ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 265 ರೂ.ಯಷ್ಟು ಹೆಚ್ಚಾಗಿದೆ. ಈ ಹೆಚ್ಚಳವು ಕಮರ್ಷಿಯಲ್ ಸಿಲಿಂಡರ್‌ಗಳ (Commercial gas cylinder price) ಮೇಲೆ ಅನ್ವಯವಾಗಲಿದೆ.
ದೆಹಲಿಯಲ್ಲಿ ಸಿಲಿಂಡರ್ ಬೆಲೆ 1998 ರೂ. ಏರಿಕೆ :
265 ರೂಪಾಯಿ ಹೆಚ್ಚಳದ ನಂತರ ದೆಹಲಿಯಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ (Commercial gas cylinder price) 1998 ರೂ.ಗೆ ಏರಿದೆ. ಇದಕ್ಕೂ ಮೊದಲು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 1733 ರೂಪಾಯಿ ಇತ್ತು. ಮುಂಬೈನಲ್ಲಿ 19 ಕೆ.ಜಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 1950 ರೂ.ಆಗಿದೆ. ಕೋಲ್ಕತ್ತಾದಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್ 2073.50 ರೂ ಆಗಿದ್ದರೆ, ಚೆನ್ನೈನಲ್ಲಿ 19 ಕೆಜಿ ಸಿಲಿಂಡರ್ 2133 ರೂ.ಗೆ ಲಭ್ಯವಾಗಲಿದೆ. ಬೆಂಗಳೂರಿನಲ್ಲಿ ಪ್ರಸ್ತುತ 19 ಕೆಜಿ ಸಿಲಿಂಡರ್ 1966 ಬೆಲೆ ಇದೆ.
ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿಯೂ ಬೆಲೆ ಏರಿಕೆ :
ಈ ಹಿಂದೆ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಕೂಡ ಪೆಟ್ರೋಲಿಯಂ ಕಂಪನಿಗಳು ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿದ್ದವು. 19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಸೆಪ್ಟೆಂಬರ್ 1 ರಂದು 43 ರೂ ಮತ್ತು ಅಕ್ಟೋಬರ್ 1 ರಂದು 75 ರೂ ಹೆಚ್ಚಿಸಲಾಗಿತ್ತು. ಕಳೆದ ತಿಂಗಳು, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ (LPG Price Hike) ಬೆಲೆಯಲ್ಲಿ ಹೆಚ್ಚಳವಾಗಿತ್ತು
ಪೆಟ್ರೋಲ್, ಡೀಸೆಲ್ ಬೆಲೆಯೂ ಏರಿಕೆ :
ಈ ಮಧ್ಯೆ, ಪೆಟ್ರೋಲಿಯಂ ಕಂಪನಿಗಳು ಸಹ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 35-35 ಪೈಸೆಗಳಷ್ಟು ಹೆಚ್ಚಿಸಿವೆ. ಈ ಹೆಚ್ಚಳದ ನಂತರ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 109.69 ರೂ.ಗೆ ಏರಿಕೆಯಾಗಿದ್ದು, ಡೀಸೆಲ್ 98.42 ರೂ.ಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 115.5 ರೂ ಮತ್ತು ಡೀಸೆಲ್ ಬೆಲೆ 106.62 ರೂ. ಆಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 110.15 ರೂ ಮತ್ತು ಡೀಸೆಲ್ 101.56 ರೂ. ಗೆ ಮಾರಾಟವಾಗುತ್ತಿದ್ದರೆ, ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 106.35 ಮತ್ತು ಡೀಸೆಲ್ ಬೆಲೆ 102.59 ಯಷ್ಟಾಗಿದೆ.
ಬೆಂಗಳೂರಿನಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ ₹ 113.15 ಹಾಗೂ ಡೀಸೆಲ್ ಬೆಲೆ ₹ 104.09 ಇದೆ.