ಬೆಂಗಳೂರು, ಫೆ. 11: ಕಳೆದ ಕೆಲವು ತಿಂಗಳ ಹಿಂದಷ್ಟೇ ಜೆಡಿಎಸ್ ಪಕ್ಷ ತೊರೆಯುವ ಸುಳಿವು ನೀಡಿದ್ದ ಜೆಡಿಎಸ್ ಮುಖಂಡ ಮಧು ಬಂಗಾರಪ್ಪ, ಜಿಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ನಡೆದಾಗಿನಿಂದಲೂ ಮಧು ಬಂಗಾರಪ್ಪ ಜೆಡಿಎಸ್ ತೊರೆಯುವ ಕುರಿತು ಸಾಕಷ್ಟು ಊಹಾಪೋಹಗಳು ಕೇಳಿ ಬರುತ್ತಿತ್ತು. ಆದರೆ ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳದ ಅವರು, ಗುರುವಾರ ಏಕಾಏಕಿ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಆ ಮೂಲಕ ದೊಡ್ಡ ಶಾಕ್ ನೀಡಿದ್ದಾರೆ. ಜೆಡಿಎಸ್ ವರಿಷ್ಠರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಮಧು ಬಂಗಾರಪ್ಪ, ದಿಢೀರನೆ ಪಕ್ಷ ತೊರೆಯುವ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನೆಂಬ ಬಗ್ಗೆ ತಿಳಿದು ಬಂದಿಲ್ಲ.
ಈ ನಡುವೆ, ಜೆಡಿಎಸ್ ತೊರೆಯುವ ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಮಧು ಬಂಗಾರಪ್ಪ, ಆ ಮೂಲಕ ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ ಎನ್ನಲಾಗಿದೆ.