ಹಿಂದೂಗಳ ಧಾರ್ಮಿಕ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅನ್ಯಧರ್ಮಿಯರು ವ್ಯಾಪಾರ-ವ್ಯವಹಾರ ಮಾಡದಂತೆ ನಿರ್ಬಂಧ ಹೇರಿದ್ದು, ಹಿಂದಿನ ಕಾಂಗ್ರೆಸ್ ಸರ್ಕಾರ(Congress Government). 2002ರಲ್ಲಿ ಕಾಂಗ್ರೆಸ್ ಸರ್ಕಾರ, ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಮಾಡಿದ ಕಾಯ್ದೆಯ ಪ್ರಕಾರ, ಹಿಂದೂ ಧಾರ್ಮಿಕ ಕೇಂದ್ರ ಮತ್ತು ಅದರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡಲು ಅನ್ಯಧರ್ಮಿಯರಿಗೆ ಅವಕಾಶವಿರುವುದಿಲ್ಲ ಎಂದು ಕಾನೂನು ಮಾಡಲಾಗಿತ್ತು ಎಂದು ರಾಜ್ಯ ಕಾನೂನು ಸಚಿವ(Law Minister) ಮಾಧುಸ್ವಾಮಿ(J. Madhuswamy) ವಿಧಾನಸಭೆಯಲ್ಲಿ(Vidhansabha) ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕ(MLA) ಯು.ಟಿ. ಖಾದರ್(U.T Khadar) ಮಾತನಾಡಿ, ಕರಾವಳಿ(Coastal) ಭಾಗದಲ್ಲಿ ಹಿಂದೂಗಳ ಧಾರ್ಮಿಕ ಉತ್ಸವ ಮತ್ತು ಜಾತ್ರೆಗಳಲ್ಲಿ ಮುಸ್ಲಿಂಮರು ವ್ಯಾಪಾರ ಮಾಡದಂತೆ ಕೆಲ ಕಿಡಿಗೇಡಿಗಳು ಬ್ಯಾನರ್ ಹಾಕುತ್ತಿದ್ದಾರೆ. ಅಂತವರ ವಿರುದ್ದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಯು.ಟಿ.ಖಾದರ್ ಮಾತಿನಿಂದ ಕೆರಳಿದ ಕರಾವಳಿ ಭಾಗದ ಬಿಜೆಪಿ ಶಾಸಕರು ‘ಕಿಡಿಗೇಡಿಗಳು’ ಎಂಬ ಪದವನ್ನು ಹಿಂಪಡೆಯುವಂತೆ ಆಗ್ರಹಿಸಿದರು. ದೇವಸ್ಥಾನದ ಆಡಳಿತ ಮಂಡಳಿಗಳು ಇಂತಹ ಕ್ರಮ ಕೈಗೊಂಡರೆ ಅದಕ್ಕೆ ನಾವು ಹೊಣೆಗಾರರಲ್ಲ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಯತ್ನಕ್ಕೆ ಕೈ ಹಾಕಬೇಡಿ ಎಂದು ಪ್ರತಿಭಟಿಸಿದರು.
ಯು.ಟಿ. ಖಾದರ್ ಮಾತಿಗೆ ಉತ್ತರ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, ಕರಾವಳಿ ಭಾಗದಲ್ಲಿ ಹಿಂದೂಗಳ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸುತ್ತಿರುವ ಬೆಳವಣಿಗೆ ನಮ್ಮ ಗಮನಕ್ಕೂ ಬಂದಿದೆ. ಆದರೆ 2002ರಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರ ಮಾಡಲು ಅವಕಾಶ ಇರುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಕಾನೂನು ಮಾಡಿತ್ತು. ಆ ಪ್ರಕಾರ ನಿರ್ಬಂಧ ವಿಧಿಸಿದರೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಕಾನೂನಿನ ಪ್ರಕಾರ ಹಿಂದೂಗಳ ಜಾತ್ರೆ-ಉತ್ಸವಗಳಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರ ಮಾಡಲು ಅವಕಾಶ ಇಲ್ಲ. ಆದರೆ ಬೇರೆ ಕಡೆ ಬೀದಿಬದಿಯಲ್ಲಿ ವ್ಯಾಪಾರ ಮಾಡಲು ಅವಕಾಶವಿದೆ.
ಅಂತಹ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧವಿರುವುದಿಲ್ಲ. ಅವರು ಎಂದಿನಂತೆ ವ್ಯಾಪಾರ ಮಾಡಬಹುದು ಎಂದು ಉತ್ತರ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಕೆಲ ಕಾಂಗ್ರೆಸ್ ಶಾಸಕರು ಕೂಡಲೇ ಕಾನೂನು ತಿದ್ದುಪಡಿ ಮಾಡುವಂತೆ ಒತ್ತಾಯಿಸಿದರು. ಆಗ ಸದ್ಯ ನಡೆಯುತ್ತಿರುವ ಜಾತ್ರೆ-ಉತ್ಸವಗಳು ಈಗಿರುವ ಕಾನೂನಿನ ಪ್ರಕಾರವೇ ನಡೆಯಲಿವೆ. ಕಾನೂನು ತಿದ್ದುಪಡಿ ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡೋಣ. ಸದ್ಯ ಈ ಹಿಂದೆ ಕಾಂಗ್ರೆಸ್ ಮಾಡಿದ್ದ ಕಾನೂನನ್ನು ಪಾಲಿಸಬೇಕೆಂದು ಮಾಧುಸ್ವಾಮಿ ತಿಳಿಸಿದರು.