ಮದ್ರಾಸ್ ಹೈಕೋರ್ಟ್ ಒಂದು ವಿಶೇಷವಾದ ಆದೇಶ ನೀಡಿದೆ. ಅದೇನಂದ್ರೆ ನಮ್ಮ ದೇಶದಲ್ಲಿ ಸಂಸ್ಕೃತ ಒಂದೇ ದೇವಭಾಷೆ ಎಂದು ನಂಬಲಾಗಿದೆ. ಆದರೆ ತಮಿಳು ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು. ಹಾಗಾಗಿ ಎಲ್ಲ ದೇಗುಲಗಳಲ್ಲಿ ಸಂಸ್ಕೃತ ಸ್ತೋತ್ರಗಳೊಂದಿಗೆ ತಮಿಳು ಸ್ತೋತ್ರಗಳನ್ನೂ ಪಠಿಸುವಂತಾಗಬೇಕು ಎಂದು ಹೇಳಿದೆ.
ಚೆನ್ನೈ: ದೇವಸ್ಥಾನಗಳಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಯುವಾಗ ಕೇವಲ ಸಂಸ್ಕೃತ ಸ್ತೋತ್ರ, ಮಂತ್ರಗಳನ್ನು ಮಾತ್ರ ಏಕೆ ಪಠಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಪ್ರಶ್ನಿಸಿದೆ. ಅಷ್ಟೇ ಅಲ್ಲ, ದೇಶಾದ್ಯಂತ ಎಲ್ಲ ದೇಗುಲಗಳಲ್ಲಿ ಸಂಸ್ಕೃತ ಸ್ತೋತ್ರಗಳೊಂದಿಗೆ ತಮಿಳು ಸ್ತೋತ್ರಗಳನ್ನೂ ಪಠಿಸುವಂತಾಗಬೇಕು ಎಂದು ಹೇಳಿದೆ. ನ್ಯಾಯಮೂರ್ತಿ ಎನ್. ಕಿರುಬಾಕರನ್ ಮತ್ತು ನ್ಯಾ.ಬಿ.ಪುಗಲೇಂಧಿ ಅವರ ಪೀಠ ಹೀಗೊಂದು ಅಭಿಪ್ರಾಯ ಮುಂದಿಟ್ಟಿದೆ. ತಮಿಳನ್ನು ದೇವರ ಭಾಷೆ ಎಂದು ಉಲ್ಲೇಖಿಸಿದೆ.
ನಮ್ಮ ದೇಶದಲ್ಲಿ ಸಂಸ್ಕೃತ ಒಂದೇ ದೇವಭಾಷೆ ಎಂದು ನಂಬಲಾಗಿದೆ. ಆದರೆ ತಮಿಳು ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು. ಅಷ್ಟೇ ಅಲ್ಲ, ಶಿವನು ನೃತ್ಯ ಮಾಡುತ್ತಿದ್ದಾಗ ಅವನ ಢಮರುಗದಿಂದ ಹುಟ್ಟಿದ ಭಾಷೆ ಇದು ಎಂಬ ನಂಬಿಕೆಯೂ ಇದೆ. ಹಾಗೇ, ತಮಿಳು ಭಾಷೆಯನ್ನು ಸೃಷ್ಟಿ ಮಾಡಿದ್ದು ಭಗವಾನ್ ಮುರುಗ ಎಂಬ ಮಾತೂ ಕೂಡ ಇದೆ. ಇಷ್ಟೆಲ್ಲ ಇರುವಾಗ ತಮಿಳು ಭಾಷೆಯನ್ನು ದೇವರ ಭಾಷೆಯೆಂದು ಪರಿಗಣಿಸುವುದು ಯೋಗ್ಯ ಇದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ತಮಿಳುನಾಡಿನಲ್ಲಿ ಇರುವ ದೇಗುಲಗಳಲ್ಲೇ ತಮಿಳು ಸ್ತೋತ್ರಗಳ ಪಠಣ ಆಗದಿದ್ದರೆ, ದೇಶದಲ್ಲಿ ಇನ್ಯಾವ ದೇವಸ್ಥಾನಗಳೂ ಇದನ್ನು ಅಳವಡಿಸಿಕೊಳ್ಳುವುದಿಲ್ಲ ಎಂದು ಕಿವಿಮಾತನ್ನೂ ಹೇಳಿದೆ.
ಕರೂರ ಜಿಲ್ಲೆಯಲ್ಲಿರುವ ಅರುಲ್ಮಿಗು ಕಲ್ಯಾಣ ಪಶುಪತೇಶ್ವರ ದೇವಸ್ಥಾನ ಪವಿತ್ರೀಕರಣ ಧಾರ್ಮಿಕ ಕಾರ್ಯಕ್ರಮದ ವೇಳೆ, ತಿರುಮುರೈಕಲ್ತ ಮಿಳು ಶೈವ ಮಂತ್ರಂ ( ಶಿವನ ಸ್ತೋತ್ರಗಳು) ಮತ್ತು ಸಂತ ಅಮರಾವತಿ ಆತರಂಗರೈ ಕರೂರರ ಹಾಡುಗಳನ್ನು ಸ್ತುತಿಸಲು ಅವಕಾಶ ಮಾಡಿಕೊಡುವಂತೆ ಸ್ಥಳೀಯ ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಧೀಶರು ಹೀಗೆ ಹೇಳಿದ್ದಾರೆ.
ಸಂಸ್ಕೃತ ಅಗಾಧವಾದ ಪ್ರಾಚೀನ ಸಾಹಿತ್ಯ ಹೊಂದಿದ ಪವಿತ್ರ ಭಾಷೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಅದಕ್ಕೆ ಸಮನಾಗಿ ಬೇರೆ ಭಾಷೆಗಳಿಲ್ಲ ಎಂದು ಕೊಳ್ಳಬಾರದು. ಅದೊಂದೇ ದೇವಭಾಷೆ ಅಲ್ಲ ಎಂದು ಇಬ್ಬರು ನ್ಯಾಯಮೂರ್ತಿಗಳ ಪೀಠ ಹೇಳಿದೆ.