ಮಹಾರಾಷ್ಟ್ರದಲ್ಲಿ(Maharashtra) ಇದೀಗ ಹನುಮಾನ್ ಚಾಲೀಸ್(Hanuman Chalisa) ಪಠಣ ಮಾಡುವ ಸಂಬಂಧ ಸೃಷ್ಟಿಯಿಂದ ವಾಕ್ಸಮರ ಇದೀಗ ಇಡೀ ದೇಶಾದ್ಯಂತ ಸುದ್ದಿಯಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ(ChiefMinister) ಉದ್ದವ್ ಠಾಕ್ರೆ(Udhav Thackrey) ಅವರ ಖಾಸಗಿ ನಿವಾಸ ‘ಮಾತೋಶ್ರೀ’ ಮುಂದೆ ಹನುಮಾನ್ ಚಾಲೀಸ್ ಪಠಿಸುತ್ತೇವೆ ಎಂದು ಸವಾಲು ಹಾಕಿದ್ದ ಸಂಸದೆ ನವನೀತ್ ರಾಣಾ ಮತ್ತು ಪಕ್ಷೇತರ ಶಾಸಕ ರವಿ ರಾಣಾ ವಿರುದ್ದ ಕಾಂಗ್ರೆಸ್-ಶಿವಸೇನಾ-ಎನ್‍ಸಿಪಿ ನೇತೃತ್ವದ ಮೈತ್ರಿ ಸರ್ಕಾರ ‘ದೇಶದ್ರೋಹ’ ಪ್ರಕರಣ ದಾಖಲಿಸಿದೆ. ಹನುಮಾನ್ ಚಾಲೀಸ್ ವಿವಾದ ಇದೀಗ ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ.
‘ಹನುಮಾನ್ ಚಾಲೀಸ್ ಪಠಣ ಮಾಡುವುದು ಯಾವಾಗಿನಿಂದ ದೇಶದ್ರೋಹವಾಯಿತು’ ಎಂದು ಬಿಜೆಪಿ ಟ್ವೀಟ್ ಮೂಲಕ ಮಹಾರಾಷ್ಟ್ರದ ಮೈತ್ರಿ ಸರ್ಕಾರವನ್ನು ಪ್ರಶ್ನಿಸಿದೆ. ಅಮರಾವತಿ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿರುವುದು ಮೈತ್ರಿ ಸರ್ಕಾರದ ದೋರಣೆಯನ್ನು ತೋರಿಸುತ್ತದೆ. ಒರ್ವ ಸಂಸದೆ ಮತ್ತು ಶಾಸಕನಿಗೆ ಈ ರೀತಿಯಾದರೆ ಸಾಮಾನ್ಯ ನಾಗರಿಕರ ಕಥೆ ಏನು? ರಾಜ್ಯ ಸರ್ಕಾರದ ವಿರುದ್ದ ಟೀಕೆ ಮಾಡುವವರನ್ನು ಬೆದರಿಸಲಾಗುತ್ತಿದೆ. ಅಧಿಕಾರದ ಮೂಲಕ ಅವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ.
ಬಿಜೆಪಿ ಪಕ್ಷವೂ ಮೈತ್ರಿ ಸರ್ಕಾರದ ಈ ಕ್ರಮವನ್ನು ಖಂಡಿಸುತ್ತದೆ ಎಂದು ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಪಡ್ನವೀಸ್ ಹೇಳಿದ್ದಾರೆ. ಇನ್ನು ಶಿವಸೇನೆ ಕಾರ್ಯಕರ್ತರು ರಾಣಾ ದಂಪತಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ದು, ತದನಂತರ ಅವರಿಬ್ಬರನ್ನೂ ದೇಶದ್ರೋಹ ಪ್ರಕರಣದಡಿ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಂದ್ರಾ ಮ್ಯಾಜಿಸ್ಟ್ರೇಟ್ ಕೋರ್ಟ್ ಇಬ್ಬರಿಗೂ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ದೇಶದ್ರೋಹಕ್ಕೆ ಸಂಬಂಧಿಸಿದಂತೆ ಸೆಕ್ಷನ್ 124(ಎ) ಆರೋಪದಡಿ ಎರಡು ವಿಭಿನ್ನ ಎಫ್‍ಐಆರ್‍ಗಳನ್ನು ಪೊಲೀಸರು ದಾಖಲಿಸಿದ್ದಾರೆ.
ಆದರೆ ರಿಮಾಂಡ್ ಅರ್ಜಿಯಲ್ಲಿ ಅದನ್ನು ಉಲ್ಲೇಖಿಸಿಲ್ಲ. ದೇಶದ್ರೋಹ ಆರೋಪವನ್ನು ವಿವರಿಸಲು ಸರ್ಕಾರಿ ವಕೀಲರು ವಿಫಲರಾಗಿದ್ದಾರೆ ಎಂದು ರಾಣಾ ದಂಪತಿ ಪರ ವಕೀಲ ರಿಜ್ವಾನ್ ಮರ್ಚೆಂಟ್ ಹೇಳಿದ್ದಾರೆ.