ಮುಂಬೈ, ಮಾ. 31: ಮಹಾರಾಷ್ಟ್ರ ರಾಜ್ಯದಲ್ಲಿ ಮಿತಿಮೀರಿ ದಾಖಲಾಗುತ್ತಿರುವ ಕೊರೋನಾ ಪ್ರಕರಣಗಳು ಏರುತ್ತಿದ್ದರೂ, ಜನರು ಇದ್ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳದೆ ಎಂದಿನಂತೆ ಜಾತ್ರೆ, ಮಾರುಕಟ್ಟೆ, ಸಭೆ ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಇರಲಿ ಮಾಸ್ಕ್ ಇಲ್ಲದೆಯೇ ತೊಡಗಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಜನಜಂಗುಳಿ ತಪ್ಪಿಸಲು ಮಹಾರಾಷ್ಟ್ರದ ನಾಶಿಕ್ ಜಿಲ್ಲಾಡಳಿತ ಹೊಸ ಉಪಾಯ ಹುಡುಕಿದ್ದು, ಮಾರುಕಟ್ಟೆ ಪ್ರದೇಶ ಪ್ರವೇಶಿಸಲು ಟಿಕೆಟ್ ನಿಗದಿ ಮಾಡಲಾಗಿದೆ. ಮಾರುಕಟ್ಟೆಗೆ ಹೋಗಲು ಐದು ರೂ ಕೊಟ್ಟು ಜನರು ಟಿಕೆಟ್ ಖರೀದಿಸಬೇಕಾಗುತ್ತದೆ. ಅದೂ ಒಂದು ಗಂಟೆ ಅವಧಿಗೆ ಮಾತ್ರ. ಇದು ಸುಖಾಸುಮ್ಮನೆ ಅನಗತ್ಯವಾಗಿ ಮಾರ್ಕೆಟ್ ಸುತ್ತಾಡಲು ಹೋಗುವವರನ್ನ ತಡೆಯಲು ನಾಶಿಕ್ ಜಿಲ್ಲಾಡಳಿತ ಮಾಡಿರುವ ಹೊಸ ಐಡಿಯಾ.
“ನಾಶಿಕ್ನಲ್ಲಿ ಕೋವಿಡ್-19 ಹರಡುವುದನ್ನು ತಡೆಯಲು ನಾವು ವಿಭಿನ್ನ ಹೆಜ್ಜೆ ಇಡುತ್ತಿದ್ದೇವೆ. ಮಾರುಕಟ್ಟೆ ಪ್ರವೇಶ ಮಾಡುವ ಜನರಿಗೆ ಒಂದು ಗಂಟೆಗೆ 5 ರೂನಂತೆ ಟಿಕೆಟ್ ನೀಡುತ್ತಿದ್ದೇವೆ. ಲಾಕ್ ಡೌನ್ ಹಂತಕ್ಕೆ ಏರುವುದನ್ನು ತಪ್ಪಿಸಲು ನಾವು ಮಾಡಿರುವ ಪ್ರಯತ್ನ ಇದಾಗಿದೆ” ಎಂದು ನಾಶಿಕ್ ಪೊಲೀಸ್ ಆಯುಕ್ತ ದೀಪಕ್ ಪಾಂಡೆ ತಿಳಿಸಿದ್ಧಾರೆ.
ನಾಶಿಕ್ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 3,532 ಕೋವಿಡ್ ಪ್ರಕರಣಗಳು ದಾಖಲಾಗಿವೆ. 23 ಮಂದಿ ಒಂದೇ ದಿನದಲ್ಲಿ ಮೃತಪಟ್ಟಿದ್ಧಾರೆ. ಇದರೊಂದಿಗೆ ನಾಶಿಕ್ ಜಿಲ್ಲೆಯಲ್ಲಿ ಇದೂವರೆಗೆ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 1,78,214 ತಲುಪಿದೆ. ಸಾವಿನ ಸಂಖ್ಯೆ 2,374 ಆಗಿದೆ.