ಮಹಾರಾಷ್ಟ್ರ(Maharashtra) ರಾಜಕೀಯದಲ್ಲಿ(Political) ಕ್ಷಣಕ್ಕೊಂದು ವಿದ್ಯಮಾನಗಳು ನಡೆಯುತ್ತಿವೆ. ಏಕನಾಥ್ ಶಿಂಧೆ(Eknath Shinde) ನೇತೃತ್ವದಲ್ಲಿ ಬಂಡಾಯವೆದ್ದಿರುವ ಸುಮಾರು 40 ಶಾಸಕರು(MLA) ಸೂರತ್ ತೊರೆದು, ಅಸ್ಸಾಂನ(Assam) ಗುವಾಹಟಿಯತ್ತ ಮುಖ ಮಾಡಿದ್ದಾರೆ. ಹೀಗಾಗಿ ಉದ್ದವ್ ಠಾಕ್ರೆ(Uddhav Thackrey) ನೇತೃತ್ವದ ‘ಮಹಾ ವಿಕಾಸ ಅಘಾಡಿ’ ಸರ್ಕಾರ ಪತನದ ಭೀತಿಯಲ್ಲಿದೆ.
ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಏಕನಾಥ್ ಶಿಂಧೆಯೊಂದಿಗೆ ಮಾತುಕತೆ ನಡೆಸಲು ಶಿವಸೇನೆ(Shivsene) ನಾಯಕ ಮಿಲಿಂದ್ ನರ್ವೇಕರ್ ಗುವಾಹಟಿಗೆ ಹೋಗಿದ್ದು, ಈ ವೇಳೆ ಬೇಡಿಕೆಯೊಂದನ್ನು ಏಕನಾಥ್ ಶಿಂಧೆ ಉದ್ದವ್ ಠಾಕ್ರೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ನಾನು ಮುಖ್ಯಮಂತ್ರಿಯಾಗುವ ಬಯಕೆ ಹೊಂದಿಲ್ಲ. ನನ್ನನ್ನು ಶಾಸಕಾಂಗ ಪಕ್ಷದ ನಾಯಕತ್ವ ಸ್ಥಾನದಿಂದ ತೆಗೆಯುವ ಅಗತ್ಯ ಇರಲಿಲ್ಲ. ಇನ್ನು ಹಿಂದೂ ವಿರೋಧಿಗಳಾದ ಎನ್ಸಿಪಿ(NCP) ಮತ್ತು ಕಾಂಗ್ರೆಸ್ನೊಂದಿಗೆ(Congress) ಶಿವಸೇನೆ ಮೈತ್ರಿ ಮಾಡಿಕೊಂಡಿರುವುದಕ್ಕೆ ಶಾಸಕರು ಬಂಡಾಯವೆದ್ದಿದ್ದಾರೆ.
ಬಾಳಸಾಹೇಬ್ ಠಾಕ್ರೆ ಅವರ ಆಶಯಗಳಿಗೆ ವಿರುದ್ದವಾಗಿ ಪಕ್ಷ ಸಾಗುತ್ತಿದೆ. ಸರ್ಕಾರದ ಅನೇಕ ಕ್ರಮಗಳು ಹಿಂದೂ ವಿರೋಧಿಯಾಗಿವೆ. ನಾವು ಶಿವಸೇನೆ ಸೈನಿಕರು. ಹೀಗಾಗಿ ರಾಜಕೀಯ ಅಧಿಕಾರಕ್ಕಾಗಿ ನಮ್ಮ ಸಿದ್ದಾಂತದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ತಕ್ಷಣವೇ, ಕಾಂಗ್ರೆಸ್-ಎನ್ಸಿಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡು, ಬಿಜೆಪಿಯೊಂದಿಗೆ ಮೈತ್ರಿಮಾಡಿಕೊಂಡು ಹೊಸ ಸರ್ಕಾರ ರಚನೆ ಮಾಡೋಣ. ಆಯ್ಕೆ ನಿಮಗೆ ಬಿಟ್ಟಿದ್ದು ಎಂದು ಏಕನಾಥ್ ಶಿಂಧೆ ಫೋನ್ನಲ್ಲಿ ಉದ್ದವ್ ಠಾಕ್ರೆಗೆ ನೇರವಾಗಿ ಹೇಳಿದ್ದಾರೆ ಎನ್ನಲಾಗಿದೆ.
ಇನ್ನು ಏಕನಾಥ್ ಶಿಂಧೆ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿರುವ ಉದ್ದವ್ ಠಾಕ್ರೆ, ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿದರೆ ಅವರು ನಮ್ಮನ್ನು ತುಳಿಯುತ್ತಾರೆ. ಅವರು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ಹೀಗಾಗಿ ಬಿಜೆಪಿಯೊಂದಿಗೆ ಮೈತ್ರಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಏಕನಾಥ್ ಶಿಂಧೆ ಮತ್ತು ಉದ್ದವ್ ಠಾಕ್ರೆ ನಡುವಿನ ಮಾತುಕತೆ ಮುರಿದು ಬಿದ್ದಿದೆ ಎನ್ನಲಾಗಿದೆ. ಇನ್ನೊಂದೆಡೆ ಸರ್ಕಾರ ಪತನವಾಗಲಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.