ಬೆಳಗಾವಿ ಡಿ 20 : ಬೆಳಗಾವಿಯಲ್ಲಿ ಪದೇ ಪದೇ ಎಂಇಎಸ್ ಪುಂಡಾಟ ನಡೆಸುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಎಂಇಎಸ್ ಅನ್ನು ನಿಷೇಧಿಸಬೇಕೆಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ. ಚಳಿಗಾಲದ ಅಧಿವೇಶನ ನಡೆಯುತ್ತಿರುವ ಬೆಳಗಾವಿಯಲ್ಲಿ ಪ್ರತಿಭಟನೆಯ ಕಿಚ್ಚು ಹೊತ್ತಿಕೊಳ್ಳುವ ಸಾಧ್ಯತೆ ಇದೆ. ರಾಜ್ಯದಲ್ಲಿ ಎಂಇಎಸ್ ಹಾಗೂ ಶಿವಸೇನೆಯ ಪುಂಡರ ಪುಂಡಾಟವನ್ನು ಕನ್ನಡ ಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆಗೆ ಕನ್ನಡಿಗರ ಶಕ್ತಿಯನ್ನು ತೋರಿಸುವ ಸಂಬಂಧ ಬೆಳಗಾವಿಯಲ್ಲಿ ಬೃಹತ್ ರಾಲಿ ನಡೆಸಲು ಕನ್ನಡಪರ ಸಂಘಟನೆಗಳು ತೀರ್ಮಾನಿಸಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕನ್ನಡ ಪರ ಸಂಘಟನೆಗಳು ಬೆಳಗಾವಿಯ ಸುವರ್ಣ ವಿಧಾನಸೌಧದಿಂದ 10 ಕಿ.ಮೀ. ದೂರದಲ್ಲಿರುವ ಹಿರೇಬಾಗೇವಾಡಿ ಮುಖಾಂತರ ಬೆಳಗಾವಿ ಪ್ರವೇಶಿಸಲು ನಿರ್ಧರಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಕನ್ನಡ ಪರ ಕಹಳೆ ಮೊಳಗಿಸಲು ಹಿರೇಬಾಗೇವಾಡಿಯಲ್ಲಿ ಸಾವಿರಾರು ಜನರು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುತ್ತಿದ್ದಾರೆ.
ಈ ಬಗ್ಗೆ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಕರವೇ ಬಣದ ನಾರಾಯಣಗೌಡ, ಬೆಂಗಳೂರಿನಿಂದ 120 ವಾಹನಗಳಲ್ಲಿ ಕರವೇ ಕಾರ್ಯಕರ್ತರು ಬೆಳಗಾವಿಯತ್ತ ಹೊರಟಿದ್ದೇವೆ. ಇದಕ್ಕೆ ಧಾರವಾಡದಲ್ಲಿನ ಕಾರ್ಯಕರ್ತರು ಸೇರ್ಪಡೆಯಾಗಿದ್ದು, ಎಲ್ಲರ ಜೊತೆಗೂಡಿ ಬೆಳಗಾವಿಯಲ್ಲಿ ಕನ್ನಡಿಗರ ಶಕ್ತಿಯನ್ನು ಪ್ರದರ್ಶನ ಮಾಡಲು ಸಜ್ಜಾಗಿದ್ದವೆ. ಎಂಎಸ್ ಹಾಗೂ ಶಿವಸೇನೆ ಪುಂಡರ ಕರ್ನಾಟಕದ ಗಡಿಯೊಳಗಿನ ಪುಂಡಾಟ. ಇದನ್ನು ಖಂಡಿಸಿ ಬೃಹತ್ ರಾಲಿಯನ್ನು ಹಮ್ಮಿಕೊಂಡಿದ್ದೇವೆ. ಮಧ್ಯಾಹ್ನ 12 ಗಂಟೆಗೆ ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಸುವರ್ಣಸೌಧಕ್ಕೆಕಾಲ್ನಡಿಗೆಯಲ್ಲಿ ಜಾಥಾ ನಡೆಸಲಿದ್ದೇವೆ. ಬೆಳಗಾವಿಯಲ್ಲಿ ಎಂಇಎಸ್ ರಾಜಕೀಯ ಸ್ಥಾನ-ಮಾನ ಕಳೆದುಕೊಂಡಿದೆ. ಎಂಇಎಸ್ ಪರ ಇದ್ದ ಏಳು ಶಾಸಕರು ಈಗ ಇಲ್ಲ ಎಂದು ತಿಳಿಸಿದರು.
ಬೆಂಗಳೂರಿನಲ್ಲೂ ನಡೆಯಲಿದೆ ಪ್ರತಿಭಟನೆ : ಬೆಳಗಾವಿ ಅಷ್ಟೇ ಅಲ್ಲ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಾಟಾಳ್ ಪಕ್ಷದ ನೃತೃತ್ವದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುವ ಈ ಪ್ರತಿಭಟನೆಯಲ್ಲಿ ಎಂಇಎಸ್ ಪುಂಡಾಟಿಕೆ ಖಂಡಿಸಿ ಮಧ್ಯಾಹ್ನ 11 ಗಂಟೆಗೆ ಕರಾಳ ದಿನ ಆಚರಿಸಲು ನಿರ್ಧರಿಸಲಾಗಿದೆ
MES ನಿಷೇಧಕ್ಕೆ ಆಗ್ರಹ : ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಂಘಟನೆಯನ್ನು ನಿಷೇಧಿಸಬೇಕು, ಕನ್ನಡ ಬಾವುಟವನ್ನು ಸುಟ್ಟುಹಾಕುವ, ಕನ್ನಡ ಭಾಷೆಗೆ ಧಕ್ಕೆಯನ್ನುಂಟುಮಾಡುವ ಸಂಘಟನೆಯನ್ನು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸಕ್ರಿಯವಾಗಿರಲು ಬಿಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಒತ್ತಾಯಿಸಿದ್ದಾರೆ. ಕಾಲ್ನಡಿಗೆ ಮೂಲಕ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ