ಜಿಬಿಎ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ (Maheshwar Rao advice about voter list) ವಿಶೇಷ ಸಮಗ್ರ ಪರಿಷ್ಕರಣೆ-2026ರ ಕಾರ್ಯ
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ, ಅರ್ಹ ಮತದಾರರು ಹೆಸರು ಸೇರ್ಪಡೆಗಾಗಿ ನಮೂನೆ-6 ಸಲ್ಲಿಸಿ
ಮುಖ್ಯ ಚುನಾವಣಾ ಆಯುಕ್ತ ಮಹೇಶ್ವರ್ ರಾವ್ ಮನವಿ
Bengaluru : ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ (Maheshwar Rao advice about voter list) ಪರಿಷ್ಕರಣೆ-2026ರ ಪ್ರಕ್ರಿಯೆ ನಡೆಯುತ್ತಿದ್ದು, ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಕಾಣಿಸದಿರುವ ಅರ್ಹ ಮತದಾರರು ಹೆಸರು ಸೇರ್ಪಡೆಗಾಗಿ ನಮೂನೆ-6 ಸಲ್ಲಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮನವಿ ಮಾಡಿದ್ದಾರೆ.
ಮತದಾರರ ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳ ಕುರಿತು ಜಿಬಿಎ ಕೇಂದ್ರ ಕಚೇರಿಯಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು.

ಅರ್ಹ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿಕೊಂಡು, ಅಗತ್ಯವಿದ್ದಲ್ಲಿ ನಿಗದಿತ ನಮೂನೆಗಳ ಮೂಲಕ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಸಂದರ್ಭದಲ್ಲಿ ಅರ್ಹ ವ್ಯಕ್ತಿಗಳು ನಮೂನೆ-6 ಸಲ್ಲಿಸುವ ಮೂಲಕ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಸಿಕೊಳ್ಳಬಹುದು.
ಕೆಲವರು ಹೆಸರು ಕಾಣಿಸದಿದ್ದರೂ ತಪ್ಪಾಗಿ ನಮೂನೆ-8 ಸಲ್ಲಿಸಿರುವ ಸಾಧ್ಯತೆಯಿದ್ದು, ಅಂತಹ ಸಂದರ್ಭದಲ್ಲೂ ಹೆಸರು ಸೇರ್ಪಡೆಗೆ ನಮೂನೆ-6 ಸಲ್ಲಿಸುವಂತೆ ಅಧಿಕಾರಿಗಳು
ತಿಳಿಸಿದ್ದಾರೆ. ಮತ್ತೊಂದೆಡೆ, ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಈಗಾಗಲೇ ಇದ್ದು, ಹೆಸರು, ವಿಳಾಸ ಅಥವಾ ಇತರೆ ವಿವರಗಳಲ್ಲಿ ತಿದ್ದುಪಡಿ ಅಗತ್ಯವಿದ್ದರೆ ಮಾತ್ರ ನಮೂನೆ-8
ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಹೀಗಾಗಿ ಮತದಾರರು ತಮ್ಮ ಸಮಸ್ಯೆಗೆ ಅನುಗುಣವಾಗಿ ಸರಿಯಾದ ನಮೂನೆಯನ್ನು ಸಲ್ಲಿಸುವುದು ಅಗತ್ಯವಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಒಟ್ಟು ಸುಮಾರು 24,07,218 ಪ್ರಕರಣಗಳಿದ್ದು, ಈ ಪೈಕಿ ಸುಮಾರು 13,40,663 ಪ್ರಕರಣಗಳ ವಿಚಾರಣೆ ಈಗಾಗಲೇ ಪೂರ್ಣಗೊಂಡಿದೆ. ಇನ್ನೂ ಸುಮಾರು 2,56,935 ಪ್ರಕರಣಗಳು ಬಾಕಿ ಉಳಿದಿವೆ.
ಬಾಕಿ ಇರುವ ಪ್ರಕರಣಗಳ ವಿಚಾರಣೆ ಹಾಗೂ ಪರಿಶೀಲನಾ ಕಾರ್ಯವನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಬಾಕಿ ಪ್ರಕರಣಗಳ ನೈಜ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಬೂತ್ ಮಟ್ಟದ ಅಧಿಕಾರಿಗಳು (BLO) ಹಾಗೂ ಸಂಬಂಧಪಟ್ಟ ADEO/ERO ಅಧಿಕಾರಿಗಳು ಸಂಪೂರ್ಣ ಪರಿಶೀಲನೆ ನಡೆಸಬೇಕು ಎಂದು ಸೂಚಿಸಲಾಗಿದೆ.
ವಿಚಾರಣೆಗೆ ಸಂಬಂಧಿಸಿದಂತೆ ಮೊದಲ ಹಂತದ ಪ್ರಕ್ರಿಯೆ ಬಾಕಿ ಇರುವ ಪ್ರಕರಣಗಳು, ಮರುನಿಗದಿಪಡಿಸಿದ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳು, ದಾಖಲೆಗಳಲ್ಲಿ ಸಣ್ಣಪುಟ್ಟ ಕೊರತೆಗಳಿರುವ ಪ್ರಕರಣಗಳು ಹಾಗೂ ದಾಖಲೆಗಳು ಸಮರ್ಪಕವಾಗಿದ್ದರೂ ಬಾಕಿ ಎಂದು ತೋರಿಸುತ್ತಿರುವ ಪ್ರಕರಣಗಳನ್ನು ಪ್ರತ್ಯೇಕವಾಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ವರದಿಗಳಲ್ಲಿ ಕಂಡುಬರುವ ಲೆಕ್ಕಾಚಾರದ ದೋಷಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಸೂಚಿಸಲಾಗಿದ್ದು, ಮಹದೇವಪುರ ಸೇರಿದಂತೆ ಕೆಲವು ವಿಧಾನಸಭಾ ಕ್ಷೇತ್ರಗಳ ವರದಿಗಳಲ್ಲಿರುವ ವ್ಯತ್ಯಾಸಗಳನ್ನು ಪರಿಶೀಲಿಸಿ ಸರಿಯಾದ ಅಂಕಿ-ಅಂಶಗಳನ್ನು ಸಲ್ಲಿಸುವಂತೆ ತಿಳಿಸಲಾಗಿದೆ.
ಮತದಾರರಿಗೆ ಮಾಹಿತಿ ತಲುಪಿಸುವ ನಿಟ್ಟಿನಲ್ಲಿ BLOಗಳು ನೋಟಿಸ್ ಸ್ವೀಕರಿಸದ ವ್ಯಕ್ತಿಗಳನ್ನು ಹಲವು ಬಾರಿ ಸಂಪರ್ಕಿಸುತ್ತಿದ್ದಾರೆ. ದೂರವಾಣಿ ಮೂಲಕ ಸಂಪರ್ಕ ಸಾಧ್ಯವಾಗದಿದ್ದರೆ ಮನೆಗೆ ತೆರಳಿ ನೋಟಿಸ್ ನೀಡುವ ಕ್ರಮ ಕೈಗೊಳ್ಳಲಾಗುತ್ತಿದೆ.
ಮೊಬೈಲ್ ಸಂಖ್ಯೆ ಲಭ್ಯವಿರುವ ಮತದಾರರಿಗೆ SMS ಅಥವಾ WhatsApp ಮೂಲಕ ಮಾಹಿತಿ ನೀಡಿ, ಸಮೀಪದ ಸ್ಥಳಕ್ಕೆ ಬಂದು ವಿಚಾರಣೆ ಅಥವಾ ಪರಿಶೀಲನಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ತಿಳಿಸಲು ಸೂಚಿಸಲಾಗಿದೆ.
ಹೆಚ್ಚಿನ ಪ್ರಕರಣಗಳು ಬಾಕಿ ಇರುವ ಪ್ರದೇಶಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ವಿಚಾರಣೆಯನ್ನು ತ್ವರಿತಗೊಳಿಸುವಂತೆ ನಿರ್ದೇಶನ ನೀಡಲಾಗಿದೆ.
ಯಲಹಂಕ, ಚಂದ್ರಶೇಖರಪುರ ಹಾಗೂ ಹೊರವಲಯದ ಪ್ರದೇಶಗಳಲ್ಲಿನ ಸಿಬ್ಬಂದಿ ಲಭ್ಯತೆ ಮತ್ತು ಇತರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮೈಕ್ರೋ ಪ್ಲಾನ್ ಸಿದ್ಧಪಡಿಸಿ ಬಾಕಿ ಪ್ರಕರಣಗಳ ಪರಿಶೀಲನೆಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.