ನವದೆಹಲಿ, ಜುಲೈ 7: ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಎನ್ ಡಿಎ 2.0 ಸರ್ಕಾರದ ಸಚಿವ ಸಂಪುಟ ಪುನರ್ ರಚನೆ/ವಿಸ್ತರಣೆಗೂ ಮುನ್ನ ಪ್ರಮುಖ ಸಚಿವರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೇಂದ್ರ ಮಂತ್ರಿ ಪರಿಷತ್ ಸೇರಲಿರುವ ಮಂತ್ರಿಗಳ ಶಪಥ ಗ್ರಹಣ ಸಮಾರೋಹ ಸಮಾರಂಭವು ರಾಷ್ಟ್ರಪತಿ ಭವನದಲ್ಲಿ ಬುಧವಾರ ಆಷಾಢ 16, 1943ನೇ ಶಖೆ(ಜುಲೈ 7, 2021) ಸಂಜೆ 6 ಗಂಟೆಗೆ ನಡೆಯಲಿದೆ. ಸಂಪುಟ ವಿಸ್ತರಣೆ ಬಳಿಕ ಹಾಲಿ ಸಂಪುಟದ ಗಾತ್ರ 60 ರಿಂದ 79ಕ್ಕೇರಲಿದೆ. ಈಗ 21 ಕ್ಯಾಬಿನೆಟ್ ದರ್ಜೆ ಸಚಿವರು, 9 ರಾಜ್ಯ ಸಚಿವರು(ಸ್ವತಂತ್ರ ಖಾತೆ) ಹಾಗೂ 29 ರಾಜ್ಯ ಸಚಿವರಿದ್ದಾರೆ. 81 ಸ್ಥಾನಗಳನ್ನು ಹೊಂದಬಹುದಾಗಿದೆ.
ಇಬ್ಬರು ಸಚಿವರ ನಿಧನ, ಮಿತ್ರಪಕ್ಷಗಳಾಗಿದ್ದ ಅಕಾಲಿದಳ, ಶಿವಸೇನೆ ಮೈತ್ರಿ ಕಳೆದುಕೊಂಡಿದ್ದರಿಂದ ಉಂಟಾಗಿರುವ ಖಾಲಿ ಸ್ಥಾನ ಸೇರಿಸಿ 28 ಸ್ಥಾನಗಳನ್ನು ತುಂಬಬಹುದಾಗಿದೆ. ಜೊತೆಗೆ ಪ್ರಕಾಶ್ ಜಾವಡೇಕರ್, ನರೇಂದ್ರ ಸಿಂಗ್ ತೋಮರ್, ಪಿಯೂಶ್ ಗೋಯೆಲ್, ಹರ್ದೀಪ್ ಸಿಂಗ್ ಪುರಿ ನಿಭಾಯಿಸುತ್ತಿರುವ ಹೆಚ್ಚುವರಿ ಖಾತೆಗಳನ್ನು ಮೋದಿ ಅವರು ಹೊಸಬರಿಗೆ ಹಂಚಬೇಕಾಗಿದೆ.
ರಾಜೀನಾಮೆ ನೀಡಿದ ಪ್ರಮುಖ ಕೇಂದ್ರ ಸಚಿವರು:
* ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್
* ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್.
* ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್.
* ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ
* ಮಹಿಳಾ ಮತ್ತು ಮಕ್ಕಳ ಖಾತೆ ರಾಜ್ಯ ಸಚಿವೆ ದೇಬಶ್ರೀ ಚೌಧುರಿ.
* ಕೇಂದ್ರ ಸಚಿವ ಸ್ಥಾನಕ್ಕೆ ಥಾವರಚಂದ್ ಗೆಹ್ಲೋಟ್ ರಾಜೀನಾಮೆ ಸಲ್ಲಿಸಿದ್ದಾರೆ.
* ಸಂಜಯ್ ಧೋತ್ರೆ, ರತನ್ ಲಾಲ್ ಕತಾರಿಯಾ ಕೂಡಾ ರಾಜೀನಾಮೆ ಸಲ್ಲಿಸಿದ್ದಾರೆ.
* ರಾವ್ ಸಾಹೇಬ್ ಧನ್ವೆ ಪಾಟೀಲ್, ಪ್ರತಾಪ್ ಚಂದ್ರ ಸಾರಂಗಿ, ಬಾಬೂಲ್ ಸುಪ್ರಿಯೋ ರಾಜೀನಾಮೆ ಸಲ್ಲಿಸಿದ್ದಾರೆ.
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಸ್ಥಾನಕ್ಕೆ ಅಶ್ವಿನಿ ಚೌಬೆ ರಾಜೀನಾಮೆ.
ಮೇಲ್ದರ್ಜೆಗೆ ಯಾರು?
ಹಾಲಿ ಸಚಿವ ಅನುರಾಗ್ ಠಾಕೂರ್, ಪುರುಷೋತ್ತಮ್ ರುಪಾಲಾ ಹಾಗೂ ಜಿ ಕಿಶಾನ್ ರೆಡ್ಡಿ, ಕಿರಣ್ ರಿಜಿಜು, ಹರ್ದೀಪ್ ಸಿಂಗ್ ಪುರಿ, ಮನುಷ್ ಮಾಂಡವ್ಯ ಹೆಚ್ಚುವರಿ ಜವಾಬ್ದಾರಿ ಪಡೆದುಕೊಳ್ಳುವ ಸಾಧ್ಯತೆಯಿದೆ.