New Delhi: ದೇಶದಲ್ಲಿರುವ ಅನೇಕ ಬ್ಯಾಂಕುಗಳಿಗೆ ಮೋಸ ಎಸಗಿ ವಿದೇಶಗಳಿಗೆ ಪರಾರಿಯಾಗಿರುವ ಅನೇಕ ಆರ್ಥಿಕ ಅಪರಾಧಿಗಳಿಂದ 15,113 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಲಾಗಿದೆ. ಆ ಹಣವನ್ನು ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ ಮರುಪಾವತಿ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ (Pankaj Chaudhary) ಅವರು ರಾಜ್ಯಸಭೆಗೆ ತಿಳಿಸಿದ್ದಾರೆ.

ಈ ಕುರಿತು ರಾಜ್ಯಸಭೆಗೆ ಮಾಹಿತಿ ನೀಡಿರುವ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು, ವಿಜಯ್ ಮಲ್ಯ (Vijay Mallya) ಮತ್ತು ನೀರವ್ ಮೋದಿ (Nirav Modi) ಸೇರಿದಂತೆ ಪರಾರಿಯಾಗಿರುವ ಆರ್ಥಿಕ ಆರೋಪಿಗಳಿಂದ 15,113 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ವಸೂಲಿ ಮಾಡಿದೆ. ಆದರೆ ಕೆಲ ಕಾರಣಗಳಿಂದ ಸಾರ್ವಜನಿಕವಾಗಿ ಪ್ರತಿಯೊಬ್ಬ ಆರೋಪಿಯಿಂದ ವಸೂಲಿಯಾದ ನಿಖರ ಮೊತ್ತದ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ವಿದೇಶಗಳಿಗೆ ಪರಾರಿಯಾಗಿರುವ ಇನ್ನು ಅನೇಕ ಅಪರಾಧಿಗಳ ಮೇಲೆ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಅವರ ಮೊಕದ್ದಮೆಗಳನ್ನು ಹೂಡಿದೆ. ಈಗಾಗಲೇ ವಿಜಯ ಮಲ್ಯ ವಿರುದ್ದ ಬ್ರಿಟನ್ನಲ್ಲಿ ಮೊಕದ್ದಮೆ ಹೂಡಲಾಗಿದೆ ಎಂದು ಅವರು ರಾಜ್ಯಸಭೆಗೆ ತಿಳಿಸಿದ್ದಾರೆ.
ಸದ್ಯ ವಿದೇಶಕ್ಕೆ ಪರಾರಿಯಾಗಿರುವ 19 ಜನ ಆರ್ಥಿಕ ಅಪರಾಧಿಗಳ ಪೈಕಿ, ವಿಜಯ ಮಲ್ಯ, ನರೇಂದ್ರಭಾಯಿ ಪಟೇಲ್ (Narendrabhai Patel) , ನೀರವ್ ಮೋದಿ, ನಿತಿನ್ ಜಯಂತಿಲಾಲ್ ಸಂದೇಸರ, ರಾಮಚಂದ್ರನ್ ದೀಪ್ತಿ ಚೇತನ್,ವಿಶ್ವನಾಥನ್ ಚೇತನ್ ಜಯಂತಿಲಾಲ್ , ಜಯಂತಿಲಾಲ್ ಸಂದೇಸರ,ಸಂದೇಸರ, ಹಿತೇಶ್ ಕುಮಾರ್, ಜುನೈದ್ ಇಕ್ಬಾಲ್ ಮೆಮನ್ (Junaid Iqbal Memon) , ಹಜ್ರಾ ಇಕ್ಬಾಲ್ ಮೆಮನ್, ಆಸಿಫ್ ಇಕ್ಬಾಲ್ ಮೆಮನ್ ಸೇರಿದಂತೆ ಹತ್ತು ಜನರನ್ನು ಆರ್ಥಿಕ ಅಪರಾಧಿಗಳ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈ ಹತ್ತು ಜನ ಉದ್ಯಮಿಗಳು ಭಾರತದ ಬ್ಯಾಂಕುಗಳಿಗೆ ಸುಮಾರು 40,000 ಕೋಟಿ ರೂಪಾಯಿ ಆರ್ಥಿಕ ವಂಚನೆ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಜಾರಿ ನಿರ್ದೇಶನಾಲಯವು ಎಲ್ಲರ ವಿರುದ್ಧವೂ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಕಾಯ್ದೆ, 2018(FEOA) ಅಡಿಯಲ್ಲಿ ಕೇಸ್ ದಾಖಲಿಸಿದೆ. ಭಾರತದಲ್ಲಿರುವ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.