ನಂದಿಗ್ರಾಮ, ಮಾ. 11: ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಿನ್ನೆ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಕೆಗೆ ತೆರಳಿದ್ದ ಸಂದರ್ಭದಲ್ಲಿ ಕೆಲವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಿಎಂ ಮಮತಾ ಬ್ಯಾನರ್ಜಿಯ ಸುತ್ತ ಪೊಲೀಸ್ ಬಂದೋಬಸ್ತ್ ಇಲ್ಲದ ಸಮಯದಲ್ಲಿ ನಾಲ್ಕು ಅಥವಾ ಐದು ಜನರಿಂದ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಈ ಹಲ್ಲೆಯಿಂದ ಅವರ ಎಡಕಾಲಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ, ಈ ಘಟನೆಯನ್ನು ಟಿಎಂಸಿ ಪಕ್ಷ ಉಗ್ರವಾಗಿ ಖಂಡಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗ ವರದಿ ಕೇಳಿದೆ.
ಘಟನೆ ಸಂಬಂಧ ಸ್ವತಃ ಮಾಧ್ಯಮದವರೊಂದಿಗೆ ಮಾತನಾಡಿರುವ ಸಿಎಂ ಮಮತಾ ಬ್ಯಾನರ್ಜಿ, “ನಾಮಪತ್ರ ಸಲ್ಲಿಸಿ ನಾನು ಮರಳಿ ಕಾರಿಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ನಾಲ್ಕರಿಂದ ಐದು ಜನ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಹಲ್ಲೆಯಿಂದ ನನ್ನ ಕಾಲಿನ ಭಾಗ ಊದಿಕೊಂಡಿದೆ. ಖಂಡಿತ ಇದು ಯೋಜಿತ ದಾಳಿಯಾಗಿದ್ದು, ಪೊಲೀಸರು ಇಲ್ಲದಿದ್ದಾಗ ನನ್ನ ಮೇಲೆ ದಾಳಿ ನಡೆಸಲು ಪಿತೂರಿ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.
ಈ ತಿಂಗಳ ಅಂತ್ಯದ ವೇಳೆಗೆ ಪ್ರಾರಂಭವಾಗುವ ಪಶ್ಚಿಮ ಬಂಗಾಳದ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ನಂದಿಗ್ರಾಮ್ ಅತಿದೊಡ್ಡ ಯುದ್ಧದ ತಾಣವಾಗಲಿದೆ. ಇದೇ ಕ್ಷೇತ್ರದಲ್ಲಿ ಬಲವಾದ ಹಿಡಿತ ಹೊಂದಿದ್ದ ಮಮತಾ ಅವರ ಆಪ್ತ ಇದೀಗ ಬಿಜೆಪಿ ಸೇರ್ಪಡೆಯಾಗಿದ್ದು, ಮಮತಾ ಅವರಿಗೆ ಸವಾಲು ಎಸೆದಿದ್ದಾರೆ. ಹೀಗಾಗಿ ಇಲ್ಲಿನ ಗೆಲುವು ಮಮತಾ ಬ್ಯಾನರ್ಜಿ ಅವರಿಗೆ ಪ್ರತಿಷ್ಠೆಯ ವಿಚಾರವಾಗಿದ್ದರೆ, ಬಿಜೆಪಿಗೂ ಅಳಿವು ಉಳಿವಿನ ಪ್ರಶ್ನೆಯಾಗಿದೆ.
ಇನ್ನೂ ಬಿಜೆಪಿಯ ಕೆಲ ನಾಯಕರು ಹಾಗೂ ರಾಜ್ಯ ಕಾಂಗ್ರೆಸ್ನ ಅಧ್ಯಕ್ಷ್ ಅಧೀರ್ ಚೌಧರಿ ಸೇರಿದಂತೆ, ಮಮತಾ ಬ್ಯಾನರ್ಜಿಯವರು ಘಟನೆಯ ಮುಖಾಂತರ ಸಿಂಪತಿ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.