Kolkata: ಹಿಂಸಾಚಾರ ಪೀಡಿತ ಬಾಂಗ್ಲಾದೇಶ (Bangladesha)ದ ಜನರು “ನಮ್ಮ ಬಾಗಿಲು ತಟ್ಟಿದರೆ” ತೃಣಮೂಲ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಅವರಿಗೆ ಆಶ್ರಯ ನೀಡಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಘೋಷಣೆ ಮಾಡಿದ್ದಾರೆ.

ಕೋಲ್ಕತ್ತಾದಲ್ಲಿ ಭಾರೀ ಮಳೆಯ ನಡುವೆ ತೃಣಮೂಲ ಕಾಂಗ್ರೆಸ್ನ (Congress) ‘ಹುತಾತ್ಮರ ದಿನಾಚರಣೆ’ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಾಂಗ್ಲಾದೇಶ ಬೇರೆ ದೇಶವಾಗಿರುವುದರಿಂದ ನಾನು ಬಾಂಗ್ಲಾದೇಶದ ಬಗ್ಗೆ ಏನನ್ನೂ ಮಾತನಾಡಲಾರೆ. ಭಾರತ ಸರ್ಕಾರ ಅದರ ಬಗ್ಗೆ ಮಾತನಾಡುತ್ತದೆ. ಆದರೆ ಅಸಹಾಯಕರು (ಬಾಂಗ್ಲಾದೇಶದಿಂದ) ಬಂಗಾಳದ ಬಾಗಿಲು ತಟ್ಟಿದರೆ, ನಾವು ಅವರಿಗೆ ಆಶ್ರಯ ನೀಡುತ್ತೇವೆ, ಈ ಕುರಿತು ವಿಶ್ವಸಂಸ್ಥೆಯ ನಿರ್ಣಯವಿದೆ.
ನೆರೆಹೊರೆಯವರು ನಿರಾಶ್ರಿತರನ್ನು ಗೌರವಿಸಬೇಕಿದೆ. ಹೀಗಾಗಿ ಬಾಂಗ್ಲಾದೇಶದಿಂದ ನಿರಾಶ್ರಿತರು ಬಂಗಾಳಕ್ಕೆ ಬಂದರೆ ಅವರಿಗೆ ನಮ್ಮ ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಸಿದ್ದವಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamatha Banerjee) ಘೋಷಿಸಿದ್ದಾರೆ.

ಇದೇ ವೇಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರನ್ನು ಉತ್ತರ ಪ್ರದೇಶದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸಾಧನೆಗಾಗಿ ಮಮತಾ ಬ್ಯಾನರ್ಜಿ ಶ್ಲಾಘಿಸಿದರು. ನೀವು ಯುಪಿಯಲ್ಲಿ ಆಡಿದ ‘ಖೇಲ್’ (ಆಟ) ಬಿಜೆಪಿ ಸರ್ಕಾರವನ್ನು (ಯುಪಿಯಲ್ಲಿ) ರಾಜೀನಾಮೆ ನೀಡುವಂತೆ ಒತ್ತಾಯಿಸಬೇಕಾಗಿತ್ತು, ಆದರೆ ನಾಚಿಕೆಯಿಲ್ಲದ ಸರ್ಕಾರವು ಏಜೆನ್ಸಿಗಳು ಮತ್ತು ಇತರ ವಿಧಾನಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಅಧಿಕಾರದಲ್ಲಿ ಮುಂದುವರಿಯುತ್ತಿದೆ. ಆದರೆ ಕೇಂದ್ರದಲ್ಲಿ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ, ಇದು ಸ್ಥಿರ ಸರ್ಕಾರವಲ್ಲ ಮತ್ತು ಶೀಘ್ರದಲ್ಲೇ ಪತನವಾಗಲಿದೆ ಎಂದು ಅವರು ಹೇಳಿದರು.
ಇನ್ನು ಬಾಂಗ್ಲಾದೇಶದಲ್ಲಿ ದೇಶದಾದ್ಯಂತ ಕಟ್ಟುನಿಟ್ಟಾದ ಕರ್ಫ್ಯೂ (Curfew) ವಿಧಿಸಲಾಗಿದೆ. ಮಿಲಿಟರಿ ಸಿಬ್ಬಂದಿ ರಾಜಧಾನಿ ಢಾಕಾದ ಕೆಲವು ಭಾಗಗಳಲ್ಲಿ ಗಸ್ತು ತಿರುಗಿದ್ದಾರೆ. ಸರ್ಕಾರಿ ಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ರಾಷ್ಟ್ರದ ಕೆಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ, ದೇಶದಾದ್ಯಂತ ಕಟ್ಟುನಿಟ್ಟಾದ ಕರ್ಫ್ಯೂ ವಿಧಿಸಲಾಗಿದೆ. ಇದುವರೆಗೂ 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ, ಸಾವಿರಾರು ಜನರು ಗಾಯಗೊಂಡಿದ್ದಾರೆ.