ಮಧ್ಯಪ್ರದೇಶ : ಮಧ್ಯಪ್ರದೇಶದ(MadhyaPradesh) ಸಾಗರ್ ನಗರದ ಖಾಸಗಿ ಶಾಲೆಯೊಂದರಲ್ಲಿ 39 ವಿದ್ಯಾರ್ಥಿಗಳಿಗೆ ಆಂಟಿ- ಕರೋನವೈರಸ್ ಲಸಿಕೆ ಡೋಸ್(Vaccination Dose) ಅನ್ನು ನೀಡಲು ಲಸಿಕೆದಾರರೊಬ್ಬರು ಒಂದೇ ಸಿರಿಂಜ್ ಅನ್ನು ಹಲವು ಬಾರಿ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದ ಮೇರೆಗೆ ಜಿಲ್ಲಾ ಲಸಿಕೆ ಅಧಿಕಾರಿಯನ್ನು ಬಂಧಿಸಿ ಅಮಾನತುಗೊಳಿಸಿದೆ ಎಂದು ಆರೋಗ್ಯ ಅಧಿಕಾರಿಗಳು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ಜೈನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಲಸಿಕೆ ಅಭಿಯಾನದ ವೇಳೆ ಬುಧವಾರ ಈ ಘಟನೆ ನಡೆದಿದ್ದು, ಜಿತೇಂದ್ರ ಅಹಿರ್ವಾರ್ ಎಂಬುವವರ ವಿರುದ್ಧ ಪ್ರಥಮ ಮಾಹಿತಿ ವರದಿ(FIR) ದಾಖಲಿಸಲಾಗಿದೆ ಎಂದು ಜಿಲ್ಲಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಧಿತ ಜಿತೇಂದ್ರ ಅಹಿರ್ವಾರ್, ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಆರೋಗ್ಯ ಇಲಾಖೆಯಿಂದ ಲಸಿಕೆ ಕಾರ್ಯಕ್ರಮವನ್ನು ಕೈಗೊಳ್ಳಲು ತರಬೇತಿ ಪಡೆದಿದ್ದಾರೆ ಎಂದು ಸಾಗರ ಜಿಲ್ಲೆಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್ಒ) ಡಾ. ಡಿ.ಕೆ ಗೋಸ್ವಾಮಿ ತಿಳಿಸಿದ್ದಾರೆ.
ಆದಾಗ್ಯೂ, ವೈರಲ್(Viral) ಆದ ವೀಡಿಯೊವೊಂದರಲ್ಲಿ, ವ್ಯಾಕ್ಸಿನ್(Vaccine) ನೀಡಲು ತನ್ನ ವಿಭಾಗದ ಮುಖ್ಯಸ್ಥರು (HOD) ಅವರ ಕಾರಿನಲ್ಲಿ ನನ್ನನ್ನು ಶಾಲೆಗೆ ಕರೆತಂದು ಕೊಟ್ಟಿರುವ ಒಂದು ಸಿರಿಂಜ್ನೊಂದಿಗೆ ಕೇಂದ್ರದಲ್ಲಿ ಹಾಜರಿದ್ದ ಎಲ್ಲರಿಗೂ ಚುಚ್ಚುಮದ್ದು ನೀಡಲು ತಿಳಿಸಿದರು. ‘ನನ್ನದೇನೂ ತಪ್ಪಿಲ್ಲ’ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಅಹಿರ್ವಾರ್ ಆರೋಪಗಳ ಬಗ್ಗೆ ಸಿಎಂಎಚ್ಒ ಡಾ.ಗೋಸ್ವಾಮಿ ಅವರನ್ನು ಕೇಳಿದಾಗ, ಇದು ತನಿಖೆಯ ವಿಷಯವಾಗಿದೆ ಮತ್ತು ಘಟನೆಗೆ ಕಾರಣರಾದ ಜಿಲ್ಲಾ ವ್ಯಾಕ್ಸಿನೇಷನ್ ಅಧಿಕಾರಿಯನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಪೊಲೀಸರು ಗುರುವಾರ ಸಂಜೆ ಸಾಗರ್ ನಗರದಿಂದ ಅಹಿರ್ವಾರ್ನನ್ನು ಬಂಧಿಸಿ(Arrest), ಜೈಲಿಗೆ(Jail) ಕಳುಹಿಸಿದ್ದೇವೆ ಎಂದು ಎಫ್ಐಆರ್ ದಾಖಲಿಸಿದ ಗೋಪಾಲ್ಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಕಮಲ್ ಸಿಂಗ್ ಠಾಕೂರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನು ಒಂದೇ ಸಿರಿಂಜ್ ಬಳಸಿ ಲಸಿಕೆ ನೀಡಿದ ಆರೋಪಿ, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 9 ರಿಂದ 12ನೇ ತರಗತಿಯ 39 ವಿದ್ಯಾರ್ಥಿಗಳಿಗೆ ಲಸಿಕೆ ನೀಡಿದ್ದಾನೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.