ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ಎಸ್‍ಪಿಯಾಗಿದ್ದ ಅಶ್ವಿನಿ ಅವರನ್ನು ವರ್ಗಾವಣೆ ಮಾಡಿ ಮೈಸೂರಿನ ಕೆಪಿಎಯಲ್ಲಿ ಇದ್ದ ಸುಮನ್ ಡಿ.ಪೆನ್ನೇಕರ್ ಅವರನ್ನು ಮಂಡ್ಯ ಎಸ್‍ಪಿ ಆಗಿ ಸರ್ಕಾರ ನೇಮಕ ಮಾಡಿರುವುದಾಗಿ ಆದೇಶ ಹೊರಡಿಸಿದೆ. ಆದರೆ ಪೆನ್ನೇಕರ್ ಅವರನ್ನು ಮಂಡ್ಯ ಎಸ್‍ಪಿ ಆಗಿ ನೇಮಕ ಮಾಡಿರುವ ಆದೇಶವನ್ನು ವಾಪಸ್ ಪಡೆಯುವಂತೆ ಸರ್ಕಾರಕ್ಕೆ ರಾಜಕೀಯ ಪ್ರಭಾವಿಗಳು ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಂಡ್ಯ ಎಸ್‍ಪಿ ಆಗಿದ್ದ ಅಶ್ವಿನಿ ಅವರ ವಿರುದ್ಧ ಕೇಳಿ ಬಂದಿದ್ದ ಆರೋಪದ ಬೆನ್ನಲ್ಲೇ ರಾಜ್ಯ ಸರ್ಕಾರ ಅಶ್ವಿನಿ ಅವರನ್ನು ಮಂಡ್ಯದಿಂದ ವರ್ಗಾವಣೆ ಮಾಡಿ, ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ಇದ್ದ ಐಪಿಎಸ್ ಆಫೀಸರ್ ಸುಮನ್ ಡಿ.ಪೆನ್ನೇಕರ್ ಅವರನ್ನು ನೇಮಿಸುವುದಾಗಿ ರಾಜ್ಯ ಸರ್ಕಾರ ನಿನ್ನೆ ಆದೇಶ ಹೊರಡಿಸಿತ್ತು. ಇದೀಗ ಪೆನ್ನೇಕರ್ ಅವರು ಅಧಿಕಾರ ಸ್ವೀಕಾರ ಮಾಡದಂತೆ ಮೌಖಿಕವಾಗಿ ಗೃಹ ಸಚಿವರು ಆದೇಶ ಮಾಡಿದ್ದಾರೆ ಎನ್ನಲಾಗಿದೆ.
ಸುಮನ್ ಡಿ.ಪೆನ್ನೇಕರ್ ಅವರು ಈ ಹಿಂದೆ ಕಾರ್ಯನಿರ್ವಹಿಸಿದ್ದ ಜಾಗದಲ್ಲಿ ಉತ್ತಮ ಅಧಿಕಾರಿ ಹಾಗೂ ಖಡಕ್ ಆಫೀಸರ್ ಎಂಬ ಹೆಸರನ್ನು ತೆಗೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಮಂಡ್ಯಗೆ ಅವರು ಬಂದರೆ ಮಂಡ್ಯ ಪೊಲೀಸ್ ಇಲಾಖೆಯಲ್ಲಿ ಕಟ್ಟುನಿಟ್ಟಿನ ಆದೇಶಗಳನ್ನು ತರುತ್ತಾರೆ ಎಂದು ಜಿಲ್ಲೆಯ ಕೆಲವು ಪೊಲೀಸ್ ಅಧಿಕಾರಿಗಳು ರಾಜಕೀಯ ಪ್ರಭಾವಿಗಳ ಬಳಿ ಅವರು ಬೇಡಾ ಬೇರೆ ಅವರನ್ನು ನೇಮಕ ಮಾಡಿಸಿ ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಇದಲ್ಲದೇ ಮಂಡ್ಯದಲ್ಲಿ ಡಿಸಿ, ಎಡಿಸಿ, ಜಿಲ್ಲಾ ಪಂಚಾಯತ್ ಸಿಓ ಸೇರಿದಂತೆ ಎಲ್ಲಾ ಪ್ರಮುಖ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳು ಇದ್ದಾರೆ ಎಂದು ಪೆನ್ನೇಕರ್ ಅವರು ಬರುವುದನ್ನು ತಡೆಯಲಾಗಿದೆ ಎನ್ನಲಾಗಿದೆ.