Udupi: ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರಗ್ಸ್(Drugs)ಹಾವಳಿ ಹೆಚ್ಚಾಗಿದ್ದು, ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಾಗಿ ಈ ಜಾಲಕ್ಕೆ ಸಿಲುಕುತ್ತಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಡ್ರಗ್ಸ್‌ಜಾಲ (manipal university drug trade) ಆಳವಾಗಿ ಬೇರೂರಿದೆ ಎಂಬ ಸುದ್ದಿ ಕೇಳಿ ಬರುತ್ತಿತ್ತು.
ಇದೀಗ ಉಡುಪಿಯ ಮಣಿಪಾಲ ವಿಶ್ವವಿದ್ಯಾಲಯ(Manipal University) ಡ್ರಗ್ಸ್‌ವ್ಯಸನ ಹೊಂದಿರುವ ವಿದ್ಯಾರ್ಥಿಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಂಡಿದ್ದು,
ಪೊಲೀಸರು ನೀಡಿರುವ ಮಾಹಿತಿ ಮತ್ತು ಆಂತರಿಕ ತನಿಖೆಯಲ್ಲಿ ದೃಢಪಟ್ಟನಂತರ ಡಗ್ಸ್ ವ್ಯಸನಿಗಳಾಗಿದ್ದ 42 ವಿದ್ಯಾರ್ಥಿಗಳನ್ನು ಒಂದು ತಿಂಗಳ ಕಾಲ ಕಾಲೇಜಿನಿಂದ ಅಮಾನತು ಮಾಡಿ ಆದೇಶ ಹೊರಡಿಸಿದೆ.

ಈ ಕುರಿತು ಮಾದ್ಯಮ ಪ್ರಕಟಣೆ ನೀಡಿರುವ ಮಣಿಪಾಲ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ವಿಶ್ವವಿದ್ಯಾಲಯ ಮತ್ತು ಪೊಲೀಸರು ಡ್ರಗ್ಸ್ ಜಾಲಕ್ಕೆ ಸಿಲುಕಿರುವ ವಿದ್ಯಾರ್ಥಿಗಳ ಕುರಿತು ಮಾಹಿತಿಗಳನ್ನು ಕಲೆ ಹಾಕಿದ್ದವು.
ಮಣಿಪಾಲ ವಿವಿಯ ಕೆಲ ವಿದ್ಯಾರ್ಥಿಗಳು ಕೂಡಾ ಡ್ರಗ್ಸ್ ಪೆಡ್ಲರ್(Drugs Peddler) ಮತ್ತು ವ್ಯಸನಿಗಳಾಗಿದ್ದಾರೆ ಎಂಬುದೂ ತನಿಖೆಯಲ್ಲಿ ಕಂಡುಬಂದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವವಿದ್ಯಾಲಯವು,
42 ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಒಂದು ತಿಂಗಳ ಕಾಲ ಅಮಾನತು ಮಾಡಿದೆ. ಇದೇ ಪ್ರವೃತ್ತಿ ಮುಂದುವರೆದರೆ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ವಿದ್ಯಾರ್ಥಿಗಳಿಗೆ (manipal university drug trade) ನೀಡಲಾಗಿದೆ.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ವಿಶ್ವವಿದ್ಯಾಲಯದಲ್ಲಿ ಆರೋಗ್ಯಕರ ವಾತಾವರಣ ಸೃಷ್ಟಿಸಲು ಬದ್ಧರಾಗಿರುವುದಾಗಿ ವಿವಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ಡ್ರಗ್ಸ್ ಜಾಲದ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಎಡಿಜಿಪಿ ಅಲೋಕ ಕುಮಾರ್ (Alok Kumar)ಕರಾವಳಿ ಜಿಲ್ಲೆಗಳ ಪೊಲೀಸ್‌ವರಿಷ್ಠಾಧಿಕಾರಿಗಳಿಗೆ ಈ ಹಿಂದೆ ಖಡಕ್‌ಸೂಚನೆ ನೀಡಿದ್ದರು.
ಹೀಗಾಗಿ ಕಳೆದ ಕೆಲ ದಿನಗಳಿಂದ ಡ್ರಗ್ಸ್ ಜಾಲದ ಬಗ್ಗೆ ತೀವ್ರ ತನಿಖೆ ನಡೆಸಿ, ಮಹತ್ವದ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದರು. ಡ್ರಗ್ಸ್ ಜಾಲದಲ್ಲಿ ಮಣಿಪಾಲ ವಿದ್ಯಾರ್ಥಿಗಳ ಹೆಸರು ಕಂಡು ಬಂದಿತ್ತು.
ಹೀಗಾಗಿ ಆ ಮಾಹಿತಿಯನ್ನು ಕೂಡಾ ಪೊಲೀಸರು ವಿವಿಯೊಂದಿಗೆ ಹಂಚಿಕೊಂಡಿದ್ದರು. ಈ ಕುರಿತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಮಚ್ಚೀಂದ್ರ(Akshay Machindra) ಮಾತನಾಡಿದ್ದು,
ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಾವು ಹಲವಾರು ಡ್ರಗ್ಸ್ ಪ್ರಕರಣಗಳನ್ನು ಪತ್ತೆ ಮಾಡಿದ್ದೇವೆ. ಈ ಕಾರ್ಯಾಚರಣೆಯಲ್ಲಿ ಅನೇಕ ಮಂದಿ ಪೆಡ್ಲರ್ ಗಳನ್ನ ವಶಕ್ಕೆ ತೆಗೆದುಕೊಂಡಿದ್ದೇವೆ.
ಪೆಡ್ಲರ್ಗಳ ಮೂಲಕ ಗ್ರಾಹಕರು ಯಾರೂ ಅನ್ನೋದು ಪತ್ತೆಯಾಗಿದೆ. ಮಣಿಪಾಲ ವಿವಿಯ ಕೆಲ ವಿದ್ಯಾರ್ಥಿಗಳು ಕೂಡಾ ಪೆಡ್ಲರ್ಗಳಾಗಿದ್ದಾರೆ ಎಂಬುದೂ ತನಿಖೆಯಲ್ಲಿ ತಿಳಿದುಬಂದಿದೆ.
ಅವರ ಹೆಸರುಗಳನ್ನು ನಾವು ಕಾಲೇಜಿನೊಂದಿಗೆ ಹಂಚಿಕೊಂಡಿದ್ದೇವೆ. ಇದಕ್ಕೆ ಮಣಿಪಾಲ ವಿವಿ ಸಕಾರಾತ್ಮಕವಾಗಿ ಸ್ಪಂದಿಸಿ ಕ್ರಮ ಕೈಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
