ಇಂಫಾಲ್, ಆ. 06: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದ ಭಾರತ ಪುರುಷರ ಹಾಕಿ ತಂಡದ ಮಿಡ್ ಫೀಲ್ಡ್ ಆಟಗಾರ ನೀಲಕಂಠ ಶರ್ಮಾ ಅವರಿಗೆ ₹75 ಲಕ್ಷ ನಗದು ಬಹುಮಾನ ಮತ್ತು ಸರ್ಕಾರಿ ಉದ್ಯೋಗ ನೀಡುವುದಾಗಿ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಘೋಷಿಸಿದ್ದಾರೆ.
ಸಿಎಂ ಬಿರೇನ್ ಸಿಂಗ್ ಅವರು ನೀಲಕಂಠ ಅವರೊಂದಿಗೆ ಗುರುವಾರ ದೂರವಾಣಿಯಲ್ಲಿ ಮಾತನಾಡಿದ್ದು, ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಜತೆಗೆ, ಪದಕ ಗೆದ್ದ ಹಾಕಿ ತಂಡದ ಸಹ ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತದ ಪುರುಷರ ಹಾಕಿ ತಂಡವು 41 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಕಚಿನ ಪದಕ ಗೆದ್ದ ಸಾಧನೆ ಮಾಡಿತ್ತು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷ ಹಾಕಿ ವಿಭಾಗದಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿ ವಿರುದ್ಧ 5-4 ಗೋಲುಗಳ ಅಂತರ ಗೆಲುವು ದಾಖಲಿಸಿ ಭಾರತ ತಂಡದ ಆಟಗಾರರು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.
ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗಳಿಸುವ ಆಟಗಾರರಿಗೆ ₹1.2 ಕೋಟಿ, ಬೆಳ್ಳಿ ಪದಕ ₹1 ಕೋಟಿ ಮತ್ತು ಕಂಚಿಗೆ ₹75 ಲಕ್ಷ ನಗದು ಬಹುಮಾನ ನೀಡುವುದಾಗಿ ಮಣಿಪುರ ಸರ್ಕಾರ ಈ ಹಿಂದೆ ಘೋಷಿಸಿತ್ತು.