ಕೇಂದ್ರ ಸರ್ಕಾರ(Central Government) ನೂತನವಾಗಿ ಜಾರಿಗೆ ತಂದಿರುವ ‘ಅಗ್ನಿಪಥ್’ ಯೋಜನೆ(Agnipath Yojana) ವಿರುದ್ದ ಉತ್ತರ ಭಾರತದಲ್ಲಿ ಸಾಕಷ್ಟು ಹಿಂಸಾಚಾರ ನಡೆಯುತ್ತಿದೆ. ವಿಪಕ್ಷಗಳು ಕೂಡಾ ಕೇಂದ್ರ ಸರ್ಕಾರದ ಈ ಯೋಜನೆಯನ್ನು ವಿರೋಧಿಸಿವೆ. ಆದರೆ ಇದೀಗ ಕಾಂಗ್ರೆಸ್ ಪಕ್ಷದ(Congress Party) ಹಿರಿಯ ನಾಯಕ ಮನೀಶ್ ತಿವಾರಿ(Manish Tiwari) ‘ಅಗ್ನಿಪಥ್’ ಯೋಜನೆಯನ್ನು ಬೆಂಬಲಿಸಿ ಟ್ವೀಟ್(Tweet) ಮಾಡಿದ್ದಾರೆ.

ದೇಶದ ಸಶಸ್ತ್ರ ಪಡೆಗಳು ಉದ್ಯೋಗ ಖಾತರಿ ಕಾರ್ಯಕ್ರಮವಾಗಬಾರದು. ಸದ್ಯದ ಪರಿಸ್ಥಿತಿಯಲ್ಲಿ ದೇಶಕ್ಕೆ ತಂತ್ರಜ್ಞಾನ ಮತ್ತು ಆಧುನಿಕ ತಾಂತ್ರಿಕ ಶಿಕ್ಷಣದ ಅರಿವಿರುವ ಯುವ ಸಶಸ್ತ್ರ ಪಡೆಯ ಅಗತ್ಯವಿದೆ. ಸೇನೆಯ ಆಧುನೀಕರಣಕ್ಕೆ ತಂತ್ರಜ್ಞಾನ ಅರಿವಿರುವ ಯುವಪಡೆ ಬೇಕಿದೆ. ಹೀಗಾಗಿ ಈ ಯೋಜನೆ ಮೂಲಕ ತಂತ್ರಜ್ಞಾನ ಅರಿವಿರುವ ಯುವಪಡೆ ಸೇನೆಗೆ ಬಲ ನೀಡಲಿದೆ. ಆದರೆ ‘ಅಗ್ನಿಪಥ್’ ಯೋಜನೆಯನ್ನು ವಿರೋಧಿಸಿ ತೀವ್ರ ಪ್ರತಿಭಟನೆ ನಡೆಸುತ್ತಿರುವ ಯುವ ಸಮುದಾಯದ ಬಗ್ಗೆ ನಾನು ಸಹಾನುಭೂತಿ ಹೊಂದಿದ್ದೇನೆ ಎಂದು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಅಗ್ನಿಪಥ್’ ಯೋಜನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನಿರುದ್ಯೋಗಿ ಯುವಕರ ಮಾತು ಕೇಳಬೇಕು. ಅಗ್ನಿಪಥ್ದಲ್ಲಿ ನಡೆಸಿ, ಅವರ ತಾಳ್ಮೆಯನ್ನು ಅಗ್ನಿಪರೀಕ್ಷೆಗೆ ಒಡ್ಡಬಾರದು ಎಂದು ವ್ಯಂಗ್ಯವಾಡಿದ್ದರು. ಇದೀಗ ಕೇಂದ್ರ ಸರ್ಕಾರ ‘ಅಗ್ನಿಪಥ್’ ಯೋಜನೆಯ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು 23ಕ್ಕೆ ಹೆಚ್ಚಿಸಿದೆ. ಇದೇ ತಿಂಗಳ 24ರಂದು ವಾಯುಪಡೆಯಲ್ಲಿ ‘ಅಗ್ನಿಪಥ್’ ಯೋಜನೆಯ ಮೂಲಕ ಮೊದಲ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.