ಮನ್‌ಮುಲ್ ಹಾಲಿನಪುಡಿ ಹಗರಣಕ್ಕೆ (Manmul milk powder adulteration ) ಹೊಸ ತಿರುವು: ಲಂಚಕ್ಕಾಗಿ ನಡೆದಿತ್ತಾ ಅಕ್ರಮ ಮಾರಾಟ
₹2.88 ಕೋಟಿ ನಷ್ಟಕ್ಕೆ ಕಾರಣವಾದ ಮನ್‌ಮುಲ್ ಹಾಲಿನಪುಡಿ ಕಲಬೆರಕೆ
ಕೊರತೆ ಸರಿದೂಗಿಸಲು ಕಲಬೆರಕೆ ಪುಡಿ ಬಳಕೆ; ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟ
Mandya : ಮಂಡ್ಯ ಹಾಲು ಒಕ್ಕೂಟ (ಮನ್‌ಮುಲ್)ನಲ್ಲಿ ನಡೆದಿದೆ ಎನ್ನಲಾದ ಹಾಲಿನಪುಡಿ (Manmul milk powder adulteration) ಕಲಬೆರಕೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಹಿಂದಿನ ಅಧ್ಯಕ್ಷರಿಗೆ ಲಂಚ ನೀಡಲು ಅಗತ್ಯವಿದ್ದ ಹಣವನ್ನು ಹೊಂದಿಸಲು ಮನ್‌ಮುಲ್‌ನ (Manmul) ಕೆನೆರಹಿತ ಹಾಲಿನಪುಡಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗಿತ್ತು ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬಳಿಕ ಗೋದಾಮಿನಲ್ಲಿ ಉಂಟಾದ ಹಾಲಿನಪುಡಿ ಕೊರತೆಯನ್ನು ಸರಿದೂಗಿಸಲು ಗೆಣಸಿನಪುಡಿ ಮಿಶ್ರಣ ಮಾಡಿದ್ದ ಕಲಬೆರಕೆ ಹಾಲಿನಪುಡಿಯನ್ನು ತಂದು ದಾಸ್ತಾನು ಮಾಡಲಾಗಿತ್ತು ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ.ಜೆ. ಶೋಭಾರಾಣಿ (Dr. V.J. Shobharani) ತಿಳಿಸಿದ್ದಾರೆ.
ಪ್ರಕರಣದಲ್ಲಿ ಸಂಸ್ಥೆಗೆ ಸುಮಾರು ₹2.88 ಕೋಟಿ ನಷ್ಟವಾಗಿರುವುದಾಗಿ (Manmul milk powder adulteration) ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣದ ಪ್ರಮುಖ ಆರೋಪಿಗಳ ಪೈಕಿ ಒಬ್ಬರಾಗಿರುವ ಪ್ರದೀಪ್‌ಕುಮಾರ್ ಜಾಧವ್ ಈ ಹಿಂದೆ ಮನ್‌ಮುಲ್‌ನ ಎಫ್‌ಜಿಎಸ್ (FGS) ಶಾಖೆಯ ಮುಖ್ಯಸ್ಥರಾಗಿದ್ದರು. ಅವರ ವಿರುದ್ಧದ ಹಲವು ಆರೋಪಗಳ ಹಿನ್ನೆಲೆಯಲ್ಲಿ ಅವರನ್ನು ಖರೀದಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು.
ಮತ್ತೆ ಹಳೆಯ ಹುದ್ದೆ ಪಡೆಯುವ ಉದ್ದೇಶದಿಂದ ಅಂದಿನ ಮನ್‌ಮುಲ್ ಅಧ್ಯಕ್ಷರಾಗಿದ್ದ, ಈಗ ಮಾಜಿ ಅಧ್ಯಕ್ಷರಾಗಿರುವ ಯು.ಸಿ. ಶಿವಕುಮಾರ್ (U.C. Shivakumar) ಅವರಿಗೆ
₹30 ಲಕ್ಷ ಲಂಚ ನೀಡಿದ್ದಾಗಿ ವಿಚಾರಣೆಯಲ್ಲಿ ಮಾಹಿತಿ ಹೊರಬಿದ್ದಿದೆ. ಈ ಹಣವನ್ನು ಹೊಂದಿಸಲು ಹಾಲಿನಪುಡಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗಿತ್ತು ಎನ್ನಲಾಗಿದೆ.
ನಂತರ ಶಿವಕುಮಾರ್ ಅವರಿಗೆ ಒಟ್ಟು ₹75 ಲಕ್ಷ ನೀಡಲಾಗಿತ್ತು ಎಂದು ಜಾಧವ್ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಲಿನಪುಡಿ
ದಾಸ್ತಾನಿನಲ್ಲಿ ಉಂಟಾದ ಕೊರತೆಯನ್ನು ಮುಚ್ಚಿಹಾಕಲು ಕಲಬೆರಕೆ ಹಾಲಿನಪುಡಿಯನ್ನು ಗೋದಾಮಿಗೆ ತಂದು ಇಡಲಾಗಿತ್ತು ಎನ್ನಲಾಗಿದೆ.
ತನಿಖೆಯ ಪ್ರಕಾರ, ಮನ್‌ಮುಲ್‌ನ ಉತ್ಪಾದನಾ ಘಟಕದಲ್ಲಿ ತಯಾರಾಗುವ ಕೆನೆರಹಿತ ಹಾಲಿನಪುಡಿ (ಎಸ್‌ಎಂಪಿ)ಯ ಬ್ಯಾಗ್‌ಗಳನ್ನು ಕದ್ದುಮುಚ್ಚಿ ಹಾಲಿನಪುಡಿ ಸಾಗಿಸುವ ವಾಹನಗಳಲ್ಲೇ ತುಂಬಲಾಗುತ್ತಿತ್ತು. ನಂತರ ಅವುಗಳನ್ನು ಅನಂತ ಎಂಬುವರಿಗೆ ಸೇರಿದ ಗೋದಾಮು-1ಕ್ಕೆ ಸಾಗಿಸಲಾಗುತ್ತಿತ್ತು.
ಅಲ್ಲಿಂದ ಖಾಸಗಿ ವ್ಯಕ್ತಿಗಳಿಗೆ ಹಾಲಿನಪುಡಿಯನ್ನು ಅಕ್ರಮವಾಗಿ ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ಆರೋಪಿಗಳು ಹಂಚಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಅಕ್ರಮ ವ್ಯವಹಾರದಿಂದ ಸಂಸ್ಥೆಯ ದಾಸ್ತಾನಿನಲ್ಲಿ ಭಾರಿ ಪ್ರಮಾಣದ ಕೊರತೆ ಉಂಟಾಗಿದೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಅಕ್ರಮವಾಗಿ ಮಾರಾಟವಾದ ಹಾಲಿನಪುಡಿಯ ಪ್ರಮಾಣ ಹಾಗೂ ಅದರ ವಹಿವಾಟಿನ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಮನ್‌ಮುಲ್‌ನ ಗೋದಾಮಿನ ದಾಸ್ತಾನು ಪರಿಶೀಲನೆಯ ವೇಳೆ ಒಟ್ಟು 110.4 ಮೆಟ್ರಿಕ್ ಟನ್ ಹಾಲಿನಪುಡಿ ಕೊರತೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೊರತೆಯನ್ನು ಸರಿದೂಗಿಸುವ ಸಲುವಾಗಿ ಸುಮಾರು 54.9 ಟನ್ ಕಲಬೆರಕೆ ಹಾಲಿನಪುಡಿಯನ್ನು ತಂದು ಮರುಪ್ಯಾಕಿಂಗ್ ಮಾಡಲಾಗಿದೆ ಎನ್ನಲಾಗಿದೆ. ಮತ್ತೊಂದೆಡೆ,
ಸುಮಾರು 55.3 ಟನ್ ಹಾಲಿನಪುಡಿ ದಾಸ್ತಾನು ಕೊರತೆ ಕಂಡುಬಂದಿದ್ದು, ಇದರ ಅಂದಾಜು ಮೌಲ್ಯ ₹2.88 ಕೋಟಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೊತ್ತವೇ ಮನ್‌ಮುಲ್‌ಗೆ ಉಂಟಾದ ನಷ್ಟ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಕೇರಳದ ವಿಕೆಎಸ್ ಮಾರ್ಕೆಟಿಂಗ್ ಮಾಲೀಕ ವಿ.ಕೆ. ಸುರೇಶ್ (V. K. Suresh) ಅವರು
ಮನ್‌ಮುಲ್‌ನ ಹಾಲಿನಪುಡಿಯನ್ನು ಅಕ್ರಮವಾಗಿ ಖರೀದಿಸಿರುವುದು ಹಾಗೂ ಕಲಬೆರಕೆಯ ಹಾಲಿನಪುಡಿ ಮಾರುಕಟ್ಟೆಗೆ ಪೂರೈಕೆಯಾಗಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಆದರೆ ಎಷ್ಟು ಪ್ರಮಾಣ ಮಾರುಕಟ್ಟೆಗೆ ಹೋಗಿದೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಮಂದಿಯನ್ನು ಬಂಧಿಸಲಾಗಿದ್ದು, ತನಿಖೆ ಮತ್ತಷ್ಟು ಚುರುಕುಗೊಂಡಿದೆ.
ಮನ್‌ಮುಲ್ ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ ಯು.ಸಿ. ಶಿವಕುಮಾರ್, ಕೇರಳದ ವಿಕೆಎಸ್ ಮಾರ್ಕೆಟಿಂಗ್ (VKS Marketing) ಮಾಲೀಕ ವಿ.ಕೆ. ಸುರೇಶ್ ಮತ್ತು ಶಿವಕುಮಾರ್ ಅವರ ಆಪ್ತ ಹಾಗೂ ಮನ್‌ಮುಲ್ ಗುತ್ತಿಗೆದಾರ ಯು.ಜಿ. ಸುರೇಶ್ ಅವರನ್ನು ಬಂಧಿಸಲಾಗಿದೆ.
ಹೆಚ್ಚಿನ ವಿಚಾರಣೆಗಾಗಿ ಶಿವಕುಮಾರ್ ಹಾಗೂ ಯು.ಜಿ. ಸುರೇಶ್ ಅವರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಮನ್‌ಮುಲ್‌ನ ಮಾಜಿ ನಿರ್ದೇಶಕ ಡಾ. ಮಂಜೇಶ್
ಅವರನ್ನೂ ಕರೆಸಿ ವಿಚಾರಣೆ ನಡೆಸಲಾಗಿದೆ. ಪ್ರಕರಣದ ವ್ಯಾಪ್ತಿ ದೊಡ್ಡದಾಗಿರುವ ಹಿನ್ನೆಲೆಯಲ್ಲಿ ತನಿಖಾಧಿಕಾರಿಯನ್ನೂ ಬದಲಾಯಿಸಲಾಗಿದೆ.
ಈವರೆಗೆ ಇನ್ಸ್‌ಪೆಕ್ಟರ್ ಎಚ್.ಎಸ್. ನವೀನ್ (H.S. Naveen) ತನಿಖೆ ನಡೆಸುತ್ತಿದ್ದು, ಇದೀಗ ಮಳವಳ್ಳಿ ಡಿವೈಎಸ್‌ಪಿ ಎಸ್.ಬಿ. ಯಶವಂತಕುಮಾರ್ (S.B. Yashwanthkumar) ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಪ್ರಕರಣದಲ್ಲಿ ಇನ್ನಷ್ಟು ಮಾಹಿತಿ ತನಿಖೆಯಿಂದ ಹೊರಬರುವ ಸಾಧ್ಯತೆಯಿದೆ.
ಇದನ್ನು ಓದಿ : https://vijayatimes.com/asha-workers-launch-indefinite-strike/