ನವದೆಹಲಿ ಆ 30 : ಭಾರತೀಯ ಯುವ ಸಮೂಹ ಗುಣಮಟ್ಟದ ಕೆಲಸಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದು, ಹಳೆಯ ಹಾದಿಯಲ್ಲೇ ನಡೆಯಲು ಯುವಜನರು ಬಯಸುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಅಭಿಪ್ರಾಯ ವ್ಯೆಕ್ತಪಡಿಸಿದರು.
ಮನ್ ಕಿ ಬಾತ್‌ನ 80 ನೇ ಅವತರಣಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದಿನ ಯುವಜನತೆ ಈ ಹಿಂದಿನ ಪೂರ್ವ ನಿರ್ಧರಿತ ಹಾದಿಯಲ್ಲಿಯೇ ನಡೆಯಲು ಬಯಸುತ್ತಿಲ್ಲ. ಯುವಜನರ ಗುರಿ ಹೊಸದು, ಆ ಗುರಿಯಿಂದ ಅವರು ಹೊಸ ಹಾದಿಯನ್ನು ಕಂಡುಕೊಳ್ಳುತ್ತಿದ್ದಾರೆ ಎಂದು ಯುವಜನತೆಯ ಶ್ಲಾಘಿಸಿದರು.
ಕ್ರೀಡಾ ವಲಯದ ಬಗ್ಗೆ ಮಾತನಾಡಿದ ಅವರು ನಮ್ಮ ಯುವ ಸಮುದಾಯದಲ್ಲಿ ಮಹತ್ವದ ಬದಲಾವಣೆ ಕಾಣುತ್ತಿದೆ. ಯುವ ಜನರ ಮನಸ್ಸು ವಿಕಾಸವಾಗುತ್ತಿದ್ದು, ಹಳೆಯ ವಿಧಾನಗಳಿಂದ ಹೊಸ ಬದಲಾವಣೆಗಳ, ಹೊಸ ಕ್ರಮಗಳತ್ತ ತೆರೆದುಕೊಳ್ಳುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಇಂದಿನ ಯುವ ಜನತೆ ವಿಭಿನ್ನತೆಯನ್ನು ಬಯಸುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತದ ಸುಧಾರಣೆಗಳು, ಯುವಕರ ಕಲ್ಪನೆಗಳನ್ನು ಸಹ ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ಹಾಗೆಯೇ ಭಾರತದ ಮಹತ್ವದ ಪಾರಂಪರಿಕ ಸಂಪ್ರದಾಯಗಳನ್ನು ಮುಂದುವರೆಸುವಂತೆಯೂ ಅವರು ಜನರಿಗೆ ಮನವಿ ಮಾಡಿದ್ದಾರೆ ಜೊತೆಗೆ ಖಾದಿ ವಸ್ತುಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಖಾದಿ ಖರೀದಿಸುವಂತೆ ಭಾರತೀಯರಲ್ಲಿ ಮೋದಿ ಮನವಿ ಮಾಡಿದ್ದಾರೆ.