ನವದೆಹಲಿ : “ರೋಹಿಂಗ್ಯಾಗಳು(Refugees) ಭಾರತದ(India) ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದ್ದಾರೆ” ಎಂದು ಬಿಜೆಪಿ(BJP) ನಾಯಕರೊಬ್ಬರು ಉಲ್ಲೇಖಿಸಿರುವ ಮಾಧ್ಯಮ ಲೇಖನವನ್ನು ಉಲ್ಲೇಖಿಸಿ ಕಾಂಗ್ರೆಸ್ ಸಂಸದ(Congress MP) ಮನೀಶ್ ತಿವಾರಿ(Manish Tiwari) ಅವರು ಬಿಜೆಪಿಯನ್ನು ಟೀಕಿಸಿದ್ದು,

“ರೋಹಿಂಗ್ಯಾಗಳು ಭಾರತಕ್ಕೆ ಬೆದರಿಕೆಯಾಗಿದ್ದರೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ, ದಾಖಲೆಗಳಿಲ್ಲದ ಭಾರತೀಯರ ಕಥೆ ಏನು?” ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಟ್ವೀಟ್(Tweet) ಮಾಡಿರುವ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು, “ಎಲ್ಲಾ ಅಕ್ರಮ ವಲಸಿಗರು ಯಾವುದೇ ರಾಷ್ಟ್ರದ ಭದ್ರತೆಗೆ ಬೆದರಿಕೆಯಾಗಿದ್ದರೆ, ಅಮೇರಿಕಾ, ಯುರೋಪ್ ಮತ್ತು ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ದಾಖಲೆಗಳಿಲ್ಲದ ಭಾರತೀಯರ ಕಥೆ ಏನು?
ರೋಹಿಂಗ್ಯಾ ಜನರ ದುರಂತ ಕಥೆ, ಹೃದಯ ವಿದ್ರಾವಕವಾಗಿದೆ. ಅವರು ಕಿರುಕುಳ, ಅತ್ಯಾಚಾರ ಮತ್ತು ನರಮೇಧದಿಂದ ಪಲಾಯನ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಆಶ್ರಯ ನೀಡಬೇಕಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ರೊಹಿಂಗ್ಯಾಗಳು ಭಾರತದ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದ್ದಾರೆ. ಆದರೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್(Aravind Kejrival) ಅವರು ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ.

ಕೇಜ್ರಿವಾಲ್ ಅವರ ತುಷ್ಟೀಕರಣ ರಾಜಕೀಯವು ದೆಹಲಿ ನಾಗರಿಕರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ ರೋಹಿಂಗ್ಯಾ ಅಕ್ರಮ ವಲಸಿಗರ ಬಗ್ಗೆ ಕಾಳಜಿ ವಹಿಸುತ್ತದೆ. ಆದರೆ ನಮ್ಮ ಸರ್ಕಾರ ರಾಷ್ಟ್ರೀಯ ಭದ್ರತೆಯೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಅಕ್ರಮ ವಲಸಿಗರ ಬಗ್ಗೆ ಕೇಂದ್ರ ಸರ್ಕಾರವು ಸ್ಪಷ್ಟ ನೀತಿಯನ್ನು ಹೊಂದಿದೆ. ರೊಹಿಂಗ್ಯಾಗಳನ್ನು ಭಾರತದಿಂದ ಗಡಿಪಾರು ಮಾಡಲಾಗುವುದು ಎಂದು ಭಾಟಿಯಾ ಹೇಳಿದ್ದಾರೆ.