ಫರೀದಾಬಾದ್, ಮಾ. 22: ಪ್ರೀತಿಸಿದವನ ಜೊತೆಯಲ್ಲೇ ಮದುವೆ ಮಾಡಿಕೊಡುವುದಾಗಿ ಭರವಸೆ ನೀಡಿ ಕರೆದೊಯ್ದ ಅಪ್ಪ, ಆಕೆಯನ್ನು ಕೊಲೆ ಮಾಡಿರುವ ಘಟನೆಯು ದಿಲ್ಲಿಯ ಫರೀದಾಬಾದ್ನಲ್ಲಿ ನಡೆದಿದೆ.
ಕೋಮಲ್ ಮೃತ ಯುವತಿ. ಈಕೆಯು ತನ್ನ ಕಾಲೇಜಿನ ಗೆಳೆಯ ಸಾಗರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಇವರಿಬ್ಬರ ಪ್ರೇಮಕ್ಕೆ ಹುಡುಗಿಯ ಪೋಷಕರು ಒಪ್ಪಲಿಲ್ಲ.
ಪ್ರಿಯಕರನನ್ನು ವರಿಸಲು ಮನೆಯಿಂದ ಓಡಿಬಂದ ಆಕೆಯು ಸಾಗರ್ನನ್ನು ಮದುವೆಯಾಗಿದ್ದಳು. ಫೆ.19ರಂದು ಮಗಳನ್ನು ಭೇಟಿಯಾದ ಆಕೆಯ ತಂದೆ ಸಾಗರ್ನ ಜೊತೆ ಸಾಂಪ್ರದಾಯಿಕವಾಗಿ ಮದುವೆ ಮಾಡಿಸುವುದಾಗಿ ಭರವಸೆ ನೀಡಿ ಆಕೆಯನ್ನು ಮನೆಗೆ ಕರೆತಂದಿದ್ದರು.
ಆನಂತರ ಕೋಮಲ್ ಅಂತ್ಯಕ್ರಿಯೆ ನಡೆಯುತ್ತಿದೆ ಎಂದು ಸಾಗರ್ಗೆ ಕರೆ ಬಂದಿದ್ದು ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ. ಪೊಲೀಸ್ ಪೇದೆಯೂ ಆಗಿದ್ದ ಕೋಮಲ್ನ ತಂದೆ ಹಾಗೂ ಆಕೆಯ ಚಿಕ್ಕಪ್ಪ ಸೇರೆ ಆಕೆಯ ಕೊಲೆ ಮಾಡಿದ್ದಾರೆ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.