ದೆಹಲಿ, ಏ. 07: ಕಾರಿನಲ್ಲಿ ಒಬ್ಬರೇ ಪ್ರಯಾಣ ಮಾಡುತ್ತಿದ್ದರೂ ಸಹ ಮಾಸ್ಕ್ ಧರಿಸಲೇಬೇಕು ಎಂದು ದೆಹಲಿ ಹೈಕೋರ್ಟ್ ಇಂದು ಆದೇಶ ಹೊರಡಿಸಿದೆ. ಕೊರೊನಾ ಸಾಂಕ್ರಾಮಿಕ ರೋಗ ಎಲ್ಲೆಡೆ ಆವರಿಸಿರುವುದರಿಂದ ಮಾಸ್ಕ್ ಧರಿಸುವುದು ವ್ಯಕ್ತಿಗೆ ಮತ್ತು ಸುತ್ತಲಿನ ಜನರಿಗೂ ‘ಸುರಕ್ಷಾ ಕವಚ’ ಆಗಲಿದೆ ಎಂದು ಹೈಕೋರ್ಟ್ ಆದೇಶ ನೀಡಿದೆ.
ಏಕಾಂಗಿಯಾಗಿ ಮಾಸ್ಕ್ ಧರಿಸದೇ ಕಾರಿನಲ್ಲಿ ಪ್ರಯಾಣಿಸಿದ್ದಕ್ಕಾಗಿ ದಂಢ ವಿಧಿಸಿದ್ದಾರೆ ಎಂದು ಪ್ರಶ್ನಿಸಿದ್ದ ಅರ್ಜಿದಾರರ ವಿಚಾರಣೆಯ ಬಳಿಕ ನ್ಯಾಯಾಧೀಶೆ ಪ್ರತಿಭಾ ಎಂ. ಸಿಂಗ್ ಈ ಹೇಳಿಕೆ ನೀಡಿದ್ದಾರೆ. ನೀವು ಕಾರಿನಲ್ಲಿ ಏಕಾಂಗಿಯಾಗಿದ್ದರೂ ಏಕೆ ಮಾಸ್ಕ್ ಧರಿಸಲು ಆಕ್ಷೇಪಿಸುತ್ತೀರಿ? ಇದು ನಿಮ್ಮ ವೈಯಕ್ತಿಕ ಸುರಕ್ಷತೆಗಾಗಿ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಕೊರೊನಾ ಸೋಂಕಿನ ಬಿಕ್ಕಟ್ಟು ದಿನೇ ದಿನೇ ಹೆಚ್ಚುತ್ತಿದೆ. ಲಸಿಕೆಯನ್ನು ಕೂಡಾ ನೀಡಲಾಗುತ್ತಿದೆ. ವ್ಯಕ್ತಿ ಲಸಿಕೆ ಪಡೆದಿದ್ದರೂ ಕೂಡಾ ಮಾಸ್ಕ್ ಧರಿಸಬೇಕು ಎಂದು ಅವರು ಹೇಳಿದ್ದಾರೆ.
ದಾರಿಯಲ್ಲಿ ಸಾಗುವಾಗ ಮಧ್ಯ ಸಿಗ್ನಲ್ ಬಿದ್ದರೆ ಕಾರನ್ನು ನಿಲ್ಲಿಸುತ್ತೇವೆ. ಕಾರಿನ ಕಿಟಕಿಯನ್ನೂ ತೆರೆಯುತ್ತೇವೆ. ಕೊರೊನಾ ಸೋಂಕು ಎಷ್ಟು ಭಯಂಕರವಾಗಿದೆ ಎಂದರೆ ಆ ಸಮಯದಲ್ಲಾದರೂ ಸೋಂಕು ವ್ಯಕ್ತಿಗೆ ತಗುಲಿ ಪರಿಣಾಮ ಬೀರಬಲ್ಲದು ಎಂದು ಅವರು ತಿಳಿಸಿದ್ದಾರೆ.
ದೆಹಲಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣದ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಹೀಗೆ ಆದೇಶ ಹೊರಡಿಸಿದೆ.