ಮೈಸೂರು, ಡಿ. 30: ಕರ್ತವ್ಯನಿರತರಾಗಿದ್ದ ಚುನಾವಣಾ ಅಧಿಕಾರಿ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕಾ ಕೇಂದ್ರದಲ್ಲಿ ಅಧಿಕಾರಿಗೆ ಹೃದಯಾಘಾತವಾಗಿದೆ. ಬುಧವಾರ ಮೈಸೂರಿನ ಪಿರಿಯಾಪಟ್ಟಣದ ಪುಷ್ಪ ಕಾನ್ವೆಂಟ್ ಮತ ಎಣಿಕಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟ ಅಧಿಕಾರಿಯನ್ನು ಬೋರೆಗೌಡ (52) ಎಂದು ಗುರುತಿಸಲಾಗಿದೆ.
ಎನ್. ಶೆಟ್ಟ ಹಳ್ಳಿ ಗ್ರಾಮ ಪಂಚಾಯಿತಿ ಚುನಾವಣಾ ಅಧಿಕಾರಿಯಾಗಿ ಬೋರೆಗೌಡ ನೇಮಕವಾಗಿದ್ದರು. ಲೋಕೋಪಯೋಗಿ ಇಲಾಖೆ ಎಇಇ ಆಗಿದ್ದ ಬೋರೆಗೌಡ ಅವರಿಗೆ ಮತ ಎಣಿಕೆ ನಡೆಯುತ್ತಿದ್ದ ವೇಳೆ ಹೃದಯಾಘಾತವಾಗಿದೆ. ಎದೆ ನೋವು ಕಾಣಿಸಿಕೊಂಡ ತಕ್ಷಣ ಅವರನ್ನು ಆಸ್ಪತ್ರೆಗೆ ರವಾನೆ ಮಾಡಲಾಯಿತು. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಬೋರೆಗೌಡ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೈಸೂರು ಜಿಲ್ಲೆಯ 250 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಮತ ಎಣಿಕೆ ಕೇಂದ್ರದ ಬಳಿ ನೂರಾರು ಜನರು ಜಮಾಯಿಸಿದ್ದಾರೆ. ಜಿಲ್ಲೆಯ 8 ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ.
ಮೈಸೂರು ನಗರದ ಮಹಾರಾಣಿ ಕಾಲೇಜು, ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ನರಸೀಪುರ ವಿದ್ಯೋದಯ ಶಾಲೆ, ಹುಣಸೂರಿನ ಸಂತ ಜೋಸೆಫ್ ಶಾಲೆ ಮತ್ತು ಪಿರಿಯಾಪಟ್ಟಣದ ಪುಷ್ಪ ಕಾನ್ವೆಂಟ್ ಮತ ಎಣಿಕೆ ನಡೆಯುತ್ತಿದೆ.