ಸೂರ್ಯನ ಕಿರಣಗಳ(Sun ray) ಶಾಖ ಮತ್ತು ಬೆಳಕಿನಿಂದ ಸಿಗುವ ಚೈತನ್ಯವನ್ನು ವಿವಿಧ ತಂತ್ರಜ್ಞಾನಗಳನ್ನು ಬಳಸಿ ಮಾನವನ ಉಪಯೋಗಕ್ಕೆ ಅನುಕೂಲವಾಗುವಂತೆ ಮಾರ್ಪಡಿಸಿ ಪಡೆಯುವುದೇ ಸೌರಶಕ್ತಿ. ಹೇರಳವಾಗಿ ಸಿಗುವ ಸೂರ್ಯನ ಬೆಳಕನ್ನು ಸೂಕ್ತವಾಗಿ ಬಳಸಿಕೊಂಡು ಈಗಾಗಲೇ ಸೋಲಾರ್ ಲೈಟ್, ಸೋಲಾರ್ ಒಲೆ, ಸೋಲಾರ್ ವಾಟರ್ ಹೀಟರ್ ಮುಂತಾದವನ್ನು ಯಶಸ್ವಿಯಾಗಿ ಬಳಸುತ್ತಿದ್ದೇವೆ. ಈಗ ಈ ಸೌರ ಶಕ್ತಿಯಿಂದ ಚಲಿಸುವ ಕಾರನ್ನು ಕೂಡ ಕಂಡುಹಿಡಿಯಲಾಗಿದೆ!
ಹೌದು, ಈ ಕಾರನ್ನು ಕಂಡು ಹಿಡಿದವರು ಶ್ರೀನಗರ(Srinagar) ಮೂಲದ ಬಿಲಾಲ್ ಅಹ್ಮದ್(Bilal Ahmed) ಎನ್ನುವ ವ್ಯಕ್ತಿ. ಮೂಲತಃ ಗಣಿತ ಶಿಕ್ಷಕರಾಗಿರುವ ಇವರು ಈಗ ಮೆಕಾನಿಕಲ್ ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ. ಐಷಾರಾಮಿ ಕಾರುಗಳಂತೆ ಬಾಗಿಲು ತೆರೆಯುವ ನಾಲ್ಕು ಬಾಗಿಲುಗಳ ಈ ಕಾರಿನ ಬಾನೆಟ್‌ನಿಂದ ಹಿಡಿದು ಹಿಂದಿನ ವಿಂಡ್‌ಶೀಲ್ಡ್‌ವರೆಗೆ ಎಲ್ಲಾ ಭಾಗಗಳು ಇವರ ಸೃಜನಶೀಲತೆಯನ್ನು ತೋರಿಸುತ್ತಿವೆ. ಮೊದಲಿಗೆ ಬಿಲಾಲ್ ಅವರು ವಿಶೇಷ ಚೇತನರಿಗಾಗಿಯೇ ವಾಹನವನ್ನು ನಿರ್ಮಿಸುವ ಗುರಿ ಹೊಂದಿದ್ದರು. ಆದರೆ ಹಣದ ಕೊರತೆಯಿಂದಾಗಿ ಅವರ ಯೋಜನೆಗಳು ಕಾರ್ಯರೂಪಕ್ಕೆ ಬರಲಿಲ್ಲ.
ಆಗ, ಇಂಧನ ಬೆಲೆ ಏರಿಕೆಯ ಬಗ್ಗೆ ಯೋಚಿಸಿದ ಇವರು ಸೌರಶಕ್ತಿಯಿಂದ ಚಲಿಸುವ ಕಾರನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಿದರು. ಹೆಚ್ಚಿನ ಸ್ಪೋರ್ಟ್ಸ್ ಕಾರುಗಳು ಕೇವಲ ಎರಡು ಆಸನಗಳನ್ನು ಹೊಂದಿವೆ. ಆದರೆ ವೆಚ್ಚದ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು, ನಾಲ್ಕು ಜನರು ಕುಳಿತುಕೊಳ್ಳಲು ಸಾಧ್ಯವಾಗುವಂತೆ ಬಿಲಾಲ್ ತಮ್ಮ ವಾಹನವನ್ನು ನಿರ್ಮಿಸಿದರು. ಯಾರಿಂದಲೂ ಯಾವುದೇ ಆರ್ಥಿಕ ಸಹಾಯವಿಲ್ಲದೆ ಸಂಪೂರ್ಣ ಸ್ವಯಂಚಾಲಿತವಾದ ಈ ಕಾರನ್ನು ತಯಾರಿಸಲು ಇದುವರೆಗೆ ಒಟ್ಟು 15 ಲಕ್ಷ ರೂ. ವೆಚ್ಚವಾಗಿದೆ ಎಂದು ಬಿಲಾಲ್ ಹೇಳಿದರು.
ಅಹ್ಮದ್ ಅವರು ನಿರ್ಮಿಸಿದ ಈ ಕಾರಿನ ಫೋಟೋಗಳು ವೈರಲ್ ಆಗುತ್ತಿದ್ದಂತೆ ರಾಜಕಾರಣಿಗಳು ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಈ ಕಾರಿನ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಲು ಕೆಲವು ರೀತಿಯ ಆರ್ಥಿಕ ಬೆಂಬಲ ಬೇಕೆನ್ನುವುದು ಬಿಲಾಲ್ ಅವರ ಆಶಯವಾಗಿದೆ, ಇದು ಕಣಿವೆಯಲ್ಲಿ ಯುವಕರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸುತ್ತದೆ ಎಂಬುದು ಅವರ ಅಭಿಪ್ರಾಯ.
ಮೂಲತಃ ಮಧ್ಯಮ ವರ್ಗದವರಾದ ಬಿಲಾಲ್ ಅವರ ಪ್ರಕಾರ, ದುಬಾರಿ ಮರ್ಸಿಡಿಸ್ ಫೆರಾರಿ ಬಿಎಂಡಬ್ಲ್ಯೂ ಮುಂತಾದ ಕಾರುಗಳು ಜನ ಸಾಮಾನ್ಯರಿಗೆ ಕೇವಲ ಕನಸು.
ಕೆಲವೇ ಕೆಲವರು ಮಾತ್ರ ಅಂತಹ ಕಾರುಗಳನ್ನು ಕೊಳ್ಳಲು ಶಸಕ್ತರಾಗಿರುತ್ತಾರೆ. ಹೀಗಾಗಿ, ಐಷಾರಾಮಿ ಕಾರು ಕೊಳ್ಳಬೇಕು ಎಂದು ಬಯಸುವ ಜನಸಾಮಾನ್ಯರಿಗೆ, ಐಷಾರಾಮಿಯಾಗಿದ್ದು, ಅವರ ಬಜೆಟ್ ನಲ್ಲಿ ಸಿಗುವ ವಾಹನವನ್ನು ನೀಡಬೇಕು ಎನ್ನುವ ಯೋಚನೆ ಬಂದಿತು ಎಂದು ಬಿಲಾಲ್ ಅಹ್ಮದ್ ಅವರು ‘ರೈಸಿಂಗ್ ಕಾಶ್ಮೀರ’ಕ್ಕೆ ತಿಳಿಸಿದರು.
ಆ ನಂತರ ಬಿಲಾಲ್ 11 ವರ್ಷಗಳ ಕಠಿಣ ಪರಿಶ್ರಮ ಮತ್ತು ಸಂಶೋಧನೆಯ ನಂತರ, ಅಂತಿಮವಾಗಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಈ ವಾಹನಕ್ಕೆ ಕಡಿಮೆ ಸೌರಶಕ್ತಿಯಿಂದ ಗರಿಷ್ಠ ಶಕ್ತಿಯನ್ನು ಉತ್ಪಾದಿಸುವ ಮೊನೊಕ್ರಿಸ್ಟಲಿನ್ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಏಕೆಂದರೆ ಇವುಗಳು ಹೆಚ್ಚು ಪರಿಣಾಮಕಾರಿ ಮತ್ತು ಕಡಿಮೆ ಮೇಲ್ಮೈ ಪ್ರದೇಶವನ್ನು ಆಕ್ರಮಿಸುತ್ತವೆ.
- ಪವಿತ್ರ