ಜಗತ್ತು ಅದೆಷ್ಟು ಮುಂದುವರಿದಿದೆ ಎಂದರೆ ಹೆಣ್ಣು ಮಕ್ಕಳು(Girl Child) ಪುರುಷರಿಗೆ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಆದರೆ ಇವತ್ತಿಗೂ ನಮ್ಮ ದೇಶದಲ್ಲಿ ಹೆಣ್ಣು ಮಗುವಾದ್ರೆ ಮೂಗು ಮುರಿಯುವ ಜನರಿಗೇನೂ ಕಡಿಮೆ ಇಲ್ಲ. ಹೆಣ್ಣು ಮಗು ಎಂದರೆ ಕಡೆಗಣಿಸುವವರ ಸಂಖ್ಯೆ ಈಗೀಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದರೂ, ಗಂಡು ಮಗು ಹುಟ್ಟಿದರೆ ಸಂಭ್ರಮಿಸುವವರ ಸಂಖ್ಯೆ ಇನ್ನೂ ದೊಡ್ಡ ಮಟ್ಟದಲ್ಲೇ ಇದೆ.
ಇಂತಹ ಕಾಲಘಟ್ಟದಲ್ಲಿ ಒಂದು ಆಸ್ಪತ್ರೆ ಹೆಣ್ಣು ಮಕ್ಕಳ ಸಂರಕ್ಷಣೆಗಾಗಿ ವಿನೂತನ ಮತ್ತು ದೇಶಕ್ಕೆ ಮಾದರಿಯಾಗುವಂತಹ ಕೆಲಸ ಮಾಡುತ್ತಿದೆ. ಅದೇ ಮಹಾರಾಷ್ಟ್ರದ(Maharashtra) ಪುಣೆಯಲ್ಲಿರುವ(Pune) ಮೆಡಿಕೇರ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ(Medicare Multi-Speciality Hospital).
ಈ ಆಸ್ಪತ್ರೆಯ ವಿಶೇಷ ಏನು ಎಂದರೆ, ಗಂಡು ಮಗು ಜನಿಸಿದರೆ ಚಿಕಿತ್ಸೆಯ ಅಷ್ಟೂ ಮೊತ್ತವನ್ನ ಒಂದು ಪೈಸೆಯೂ ಬಿಡದಂತೆ ವಸೂಲಿ ಮಾಡಲಾಗುತ್ತದೆ. ಆದ್ರೆ, ಅದೇ ಹೆಣ್ಣು ಮಗು ಜನಿಸಿದ್ರೆ ಉಚಿತವಾಗಿ ಚಿಕಿತ್ಸೆ ನೀಡಿ, ಮಗು ಮತ್ತು ತಾಯಿಯನ್ನು ನಗುಮೊಗದೊಂದಿಗೆ ಆರೈಕೆ ಮಾಡುತ್ತಾರೆ. ಇಂತಹದ್ದೊಂದು ವಿಶಿಷ್ಟ ಕೆಲಸವನ್ನು ಈ ಆಸ್ಪತ್ರೆ ಹಲವು ವರ್ಷಗಳಿಂದಲೂ ಮಾಡಿಕೊಂಡು ಬರುತ್ತಿದೆ. ಆಸ್ಪತ್ರೆಯ ಅಧ್ಯಕ್ಷರಾಗಿರುವ ಡಾ. ಗಣೇಶ್ ರಾಖ್(Dr. Ganesh Rakh) ಹೆಣ್ಣು ಮಕ್ಕಳೆಡೆಗೆ ನಮ್ಮ ಸಮಾಜಕ್ಕಿರುವ ಅಸಡ್ಡೆಯನ್ನು ತೊಡೆದುಹಾಕುವ ಉದ್ದೇಶದಿಂದ ಇಂತಹದ್ದೊಂದು ಮಹತ್ತರವಾದ ಕಾರ್ಯವನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಈ ಮೆಡಿಕೇರ್ ಆಸ್ಪತ್ರೆಯ ಇನ್ನೊಂದು ವಿಶೇಷ ಎಂದರೆ, ಹೆಣ್ಣು ಮಗುವಿನ ಹೆರಿಗೆ ವೆಚ್ಚವನ್ನು ಮನ್ನಾ ಮಾಡುವುದರ ಜೊತೆಗೆ, ಹೆಣ್ಣು ಮಗು ಹುಟ್ಟಿದರೆ ಇಡೀ ಆಸ್ಪತ್ರೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗುತ್ತದೆ. ಆ ದಿನ ಇಡೀ ಆಸ್ಪತ್ರೆಯಲ್ಲಿರುವ ಎಲ್ಲರಿಗೂ ಸಿಹಿ ಹಂಚಿ, ಹೆಣ್ಣು ಮಗು ಹುಟ್ಟಿದ ಕಾರಣಕ್ಕೆ ಸಂಭ್ರಮವನ್ನು ಆಚರಿಸಲಾಗುತ್ತದೆ ಎಂದು ಹೇಳುತ್ತಾರೆ. ಈ ಆಸ್ಪತ್ರೆಯಲ್ಲಿ ಹುಟ್ಟುವ ಪ್ರತಿ ಹೆಣ್ಣು ಮಗುವನ್ನೂ ಇದೇ ರೀತಿಯ ಸಂಭ್ರಮದಿಂದ ಸ್ವಾಗತಿಸಲಾಗುತ್ತದೆ. ಭಾರತದಲ್ಲಿ ಭ್ರೂಣ ಹತ್ಯೆ ಕಾನೂನು ಬಾಹಿರವಾಗಿದ್ದರೂ ಕೂಡ ಕೆಲವು ಕಡೆಗಳಲ್ಲಿ ಇನ್ನೂ ಹೆಣ್ಣು ಮಗುವಿನ ಭ್ರೂಣ ಹತ್ಯೆ ನಡೆಯುತ್ತಲೇ ಇದೆ.
ಮಹಾರಾಷ್ಟ್ರದಲ್ಲಿ ಹೆಣ್ಣು ಮತ್ತು ಗಂಡಿನ ನಡುವಿನ ಅನುಪಾತ ಆತಂಕ ಸೃಷ್ಟಿಸುವಷ್ಟರ ಮಟ್ಟಿಗಿದೆ. ಅಲ್ಲಿ ಪ್ರತೀ ಒಂದು ಸಾವಿರ ಗಂಡು ಮಕ್ಕಳಿಗೆ ಕೇವಲ 929 ಹೆಣ್ಣುಮಕ್ಕಳಷ್ಟೇ ಇದ್ದಾರೆ. ಅಂದರೆ ಬರೋಬ್ಬರಿ 71 ಹೆಣ್ಣುಮಕ್ಕಳು ಪ್ರತೀ ಸಾವಿರ ಗಂಡುಮಕ್ಕಳಿಗಿಂತ ಕಡಿಮೆಯಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ಈ ಆಸ್ಪತ್ರೆಯ ಅಧ್ಯಕ್ಷರಾದ ಗಣೇಶ್ ರಾಖ್ ತಮ್ಮ ಆಸ್ಪತ್ರೆಯಲ್ಲಿ ಇಂತಹ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಈ ಕಾರ್ಯಕ್ರಮದಿಂದಾಗಿ ಕಳೆದ ನಾಲ್ಕು ವರ್ಷಗಳಲ್ಲಿ 500ಕ್ಕೂ ಹೆಚ್ಚು ಹೆಣ್ಣು ಮಕ್ಕಳ ಪ್ರಾಣ ಉಳಿದಿದೆ. ಇಲ್ಲದಿದ್ದರೆ ಭ್ರೂಣಾವಸ್ಥೆಯಲ್ಲಿಯೇ ಅವುಗಳ ಕತ್ತು ಹಿಸುಕುವ ಕೆಲಸ ಸದ್ದಿಲ್ಲದೇ ನಡೆದುಹೋಗುತ್ತಿತ್ತೋ ಏನೋ.

ಅಷ್ಟಕ್ಕೂ ಡಾ. ಗಣೇಶ್ ಅವರು ಇಂತಹ ವಿನೂತನ ಆಚರಣೆಯನ್ನು ಜಾರಿಗೆ ತರಲು ಕಾರಣವೇನು ಅನ್ನೋದನ್ನ ಅವರೇ ವಿವರಿಸಿದ್ದಾರೆ. “ನಮ್ಮ ಆಸ್ಪತ್ರೆಗೆ ಪ್ರತಿ ನಿತ್ಯ ಸಾಕಷ್ಟು ಗರ್ಬಿಣಿಯರು ಬರುತ್ತಾರೆ. ನಾಲ್ಕು ವರ್ಷದ ಹಿಂದೆ, ತನ್ನ ಹೆಂಡತಿಗೆ ಹೆಣ್ಣು ಮಗುವಾಗಿದೆ ಎಂದು ಗೊತ್ತಾಗುತ್ತಿದ್ದಂತೆ ಗಂಡ ಮತ್ತು ಆತನ ಮನೆಯವರು ಆಸ್ಪತ್ರೆಗೆ ಹಣ ಕಟ್ಟುವ ವಿಚಾರಕ್ಕಾಗಿ ಜಗಳ ಮಾಡಿದರು. ಅವತ್ತೇ ನಾನು ನಿರ್ಧಾರ ಮಾಡಿದೆ. ಇನ್ನು ಮುಂದೆ ಈ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದರೆ ಚಿಕಿತ್ಸೆ ಮತ್ತು ಆರೈಕೆಯನ್ನು ಉಚಿತವಾಗಿಯೇ ಮಾಡಬೇಕು ಎನ್ನುವ ನಿರ್ಧಾರ ತೆಗೆದುಕೊಂಡೆ” ಎಂದು ಹೇಳುತ್ತಾರೆ.
ಮೆಡಿಕೇರ್ ಆಸ್ಪತ್ರೆ ಅಧ್ಯಕ್ಷ ಡಾ. ಗಣೇಶ್ ರಾಖ್, ಎಲ್ಲರಿಗೂ ಸ್ಫೂರ್ತಿಯಾಗುವ ಇಂತಹ ವಿಶಿಷ್ಟವಾದ ಆಚರಣೆಯನ್ನು ನಡೆಸಿಕೊಂಡು ಬರುತ್ತಿರುವ ಈ ಕಾರ್ಯಕ್ಕೆ ನಿಜಕ್ಕೂ ಶ್ಲಾಘನೆ ವ್ಯಕ್ತಪಡಿಸಲೇಬೇಕು. ಇಂಥ ವೈದ್ಯರು ಎಲ್ಲಾ ಆಸ್ಪತ್ರೆಗಳಲ್ಲೂ ಇರಬೇಕು ಎಂಬುದೇ ನಮ್ಮ ಆಶಯ.
- ಪವಿತ್ರ ಸಚಿನ್