ಗುವಾಹಟಿ ಆ 27 : ಕೊರೊನಾ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೇಘಾಲಯ ಸರ್ಕಾರ ಸೆಪ್ಟೆಂಬರ್ 1 ರಿಂದ ಪ್ರವಾಸಿಗರಿಗೆ ರಾಜ್ಯದ ಎಲ್ಲ ಪ್ರವಾಸಿ ತಾಣಗಳ ಬಾಗಿಲು ತೆರೆಯಲು ನಿರ್ಧರಿಸಿದೆ.
ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿರುವ ಸರ್ಕಾರ, ಪೂರ್ಣ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಪ್ರವಾಸಿಗರಿಗೆ ಯಾವುದೇ ನಿಬಂಧನೆಗಳಿಲ್ಲದೇ, ಪ್ರವಾಸಿ ತಾಣಗಳ ಭೇಟಿಗೆ ಅವಕಾಶ ನೀಡಲಾಗುತ್ತದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಮೊದಲ ಡೋಸ್ ಲಸಿಕೆ ಪಡೆದವರು ಅಥವಾ ಲಸಿಕೆ ಹಾಕಿಸಿಕೊಳ್ಳದಿರುವವರು ರಾಜ್ಯವನ್ನು ಪ್ರವೇಶಿಸುವ 72 ಗಂಟೆಗಳಿಗೆ ಮುನ್ನ ಆರ್ಟಿಪಿಸಿಆರ್/ಟ್ರೂನ್ಯಾಟ್ ಅಥವಾ ಸಿಬಿಎನ್ಎಎಟಿ ಪರೀಕ್ಷೆ ಮಾಡಿಸಿರುವ ಕೋವಿಡ್– ನೆಗೆಟಿವ್ ವರದಿಯನ್ನು ಸಲ್ಲಿಸಬೇಕು ಎಂದು ನಿಬಂಧನೆ ಇದೆ ಎಂದು ಹೇಳಿದೆ.
ಪ್ರಸ್ತುತ ರಾಜ್ಯದಲ್ಲಿ 2600 ಕೋವಿಡ್–19 ಸಕ್ರಿಯ ಪ್ರಕರಣಗಳಿವೆ. ನಿತ್ಯ 200ಕ್ಕಿಂತ ಕಡಿಮೆ ಹೊಸ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ.