ಮೆಕ್ಸಿಕೊ, ಆ. 24: ಮೆಕ್ಸಿಕೊ ಖಾರಿಯ ತೈಲ ಘಟಕವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಐದು ಕಾರ್ಮಿಕರು ಮೃತಪಟ್ಟಿದ್ದು, ಆರು ಮಂದಿಗೆ ಗಾಯಗಳಾಗಿವೆ. ಇನ್ನಿಬ್ಬರು ನಾಪತ್ತೆಯಾಗಿದ್ದಾರೆ ಎಂದು ಮೆಕ್ಸಿಕೊ ಮಾಲೀಕತ್ವದ ಪೆಟ್ರೋಲಿಯೋಸ್ ಮೆಕ್ಸಿಕಾನೋಸ್ ಸಂಸ್ಥೆಯು ಹೇಳಿದೆ.
ಕು-ಮಲೂಬ್-ಜಾಪ್ನ ತೈಲ ಸಂಸ್ಕರಣಾ ಘಟಕದಲ್ಲಿ ಕಾಣಿಸಿಕೊಂಡ ಬೆಂಕಿ ಅವಘಡದಿಂದ 125 ತೈಲ ಬಾವಿಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ಮೆಕ್ಸಿಕೊದ ದೈನಂದಿನ ತೈಲ ಉತ್ಪಾದನೆಯು 4,21,000 ಬ್ಯಾರೆಲ್ಗೆ ಇಳಿದಿದೆ. ಸಂಸ್ಥೆಯ ದೈನಂದಿನ ಆದಾಯದಲ್ಲಿ 25 ದಶಲಕ್ಷ ಡಾಲರ್ ನಷ್ಟವಾಗಿದೆ.
ಈ ಬೆಂಕಿ ಅವಘಡದಲ್ಲಿ ನಾಪತ್ತೆಯಾಗಿರುವ ಇಬ್ಬರು ಕಾರ್ಮಿಕರಿಗಾಗಿ ಶೋಧ ನಡೆಸಲಾಗುತ್ತಿದೆ. ತೈಲ ಘಟಕವು ಸಂಪೂರ್ಣ ಹಾನಿಗೊಳಗಾಗಿದೆ. ಇದರಲ್ಲಿ ಮೃತಪಟ್ಟ ಕೆಲ ಕಾರ್ಮಿಕರು ಗ್ಯಾಸ್ ಲೈನ್ ಸ್ವಚ್ಛತೆ ಮತ್ತು ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದರು ಎಂದು ಸಂಸ್ಥೆಯ ನಿರ್ದೇಶಕ ಆಕ್ಟೇವಿಯೊ ರೊಮೆರೊ ತಿಳಿಸಿದರು.