ಸಮುದ್ರದ(Sea) ಆಳದಲ್ಲಿ ಏನಿದೆ ಎನ್ನುವುದು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಪ್ರಶ್ನೆ. ಸಮುದ್ರ ಗರ್ಭದಲ್ಲಿ ಮುತ್ತು, ರತ್ನ, ಹವಳಗಳಷ್ಟೇ ಅಲ್ಲದೇ ಬಂಗಾರ ಕೂಡ ಇದೆ. ಆದರೆ ಇವನ್ನೆಲ್ಲ ಹೊರತುಪಡಿಸಿ ಇನ್ನೂ ಕೆಲವು ಸೋಜಿಗಗಳೂ ಕಾಣಸಿಗುತ್ತವೆ. ಇವುಗಳಲ್ಲಿ ಡೈವಿಂಗ್ ಬೆಲ್ ಸ್ಪೈಡರ್ ಕೂಡ ಒಂದು. ಇದು ಭೂಮಿಯ ಮೇಲಿನ ಜೇಡವಾದರೂ ಬಲೆ ಕಟ್ಟುವುದು ಮಾತ್ರ ಸಮುದ್ರದ ಆಳದಲ್ಲಿ. ಇದು ಜೀವನದ ಬಹುಪಾಲು ಸಮಯವನ್ನು ನೀರಿನ ಅಡಿಯಲ್ಲೇ ಸವೆಸುತ್ತದೆ.

ಈ ಜೇಡ ನೀರಿನಡಿಯಲ್ಲಿ ಉಸಿರಾಡುವ ಪರಿಯೇ ಅದ್ಭುತ. ತನ್ನ ಹೊಟ್ಟೆಯ ರೋಮಗಳಲ್ಲಿ ಗಾಳಿಯ ಗುಳ್ಳೆಯನ್ನು ಹಿಡಿದುಕೊಂಡು ನೀರಿನಾಳಕ್ಕೆ ಹೋಗುತ್ತದೆ. ಅಲ್ಲಿ ಬಲೆಯನ್ನು ಕಟ್ಟಿ ಈ ಗುಳ್ಳೆಯನ್ನು ಬಲೆಯಲ್ಲಿ ಬಂಧಿಸಿಟ್ಟು ಅದರಲ್ಲಿ ತಲೆ ಇರಿಸಿ ಕುಳಿತುಕೊಳ್ಳುತ್ತದೆ. ಈ ಗುಳ್ಳೆ ನೀರಿನಿಂದ ಆಮ್ಲಜನಕ ಹೀರುವುದರಿಂದ ಜೇಡಕ್ಕೆ ಸುಮಾರು ಒಂದು ದಿನಕ್ಕೆ ಆಗುವಷ್ಟು ಆಮ್ಲಜನಕ ಸಿಗುತ್ತದೆ. ಮಾರನೇ ದಿನ ಬಂದು ಇನ್ನೊಂದು ಗುಳ್ಳೆ ತೆಗೆದುಕೊಂಡು ಹೋಗುತ್ತದೆ. ಇನ್ನು ಹೆಣ್ಣು ಜೇಡ ದೊಡ್ಡ ಗುಳ್ಳೆಯನ್ನೇ ಒಯ್ದು ಅದರಲ್ಲಿ ಮೊಟ್ಟೆ ಕೂಡ ಇಡುತ್ತದೆ.
ಇನ್ನು, ಸಮುದ್ರದಾಳದಲ್ಲಿ ಅರಣ್ಯ ಕೂಡ ಇರುತ್ತದೆ.
ನೂರೈವತ್ತು ಅಡಿ ಆಳದಲ್ಲಿ ಹುಟ್ಟಿದ ಮರಗಳು ನೀರಿನ ಮೇಲ್ಮೈ ತನಕ ಬೆಳೆಯುತ್ತವೆ. ದಿನಕ್ಕೆ 2 ಅಡಿ ಬೆಳೆಯುವ ಮರಗಳೂ ಇವೆ.
ಸಮುದ್ರದ ಆಳದಲ್ಲಿ ನದಿಗಳು ಹರಿಯುತ್ತವೆ! ಹೌದು, ಮೆಕ್ಸಿಕೊದಲ್ಲಿ ಇಂತಹ ನದಿಯೊಂದನ್ನು 2010 ರಲ್ಲಿ ಡೈವಿಂಗ್ ಮಾಡುವವರು ಗಮನಿಸಿದರು. ಸಮುದ್ರದ ಸುಮಾರು 25 ಅಡಿ ಆಳದಲ್ಲಿ ಸುಂದರವಾದ ನದಿಯನ್ನು ನೋಡಿದ ಇವರಿಗೆ ಇದು ಕನಸೋ ನನಸೋ ಅಂತ ಗೊತ್ತಾಗಲಿಲ್ಲ. ಆ ನದಿಗೆ ದಂಡೆಗಳು, ಆ ದಂಡೆಯಲ್ಲಿ ಮರಗಳು, ನದಿಯ ನೀರಿನ ಮೇಲೆ ಮೋಡದಂತಹ ಹೊಗೆ ನೋಡಿ ಇವರಿಗೆ ತಾವು ಭೂಮಿಯ ಮೇಲೆ ಗಾಳಿಯಲ್ಲಿ ಹಾರುತ್ತಾ ನದಿಯನ್ನು ನೋಡುತ್ತಿರುವ ಅನುಭವ ಆಗಿದೆಯಂತೆ.

ಆದರೆ ನೀರಿನಲ್ಲಿ ನೀರು ಹರಿಯಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಅಸಲಿಗೆ ಈ ನದಿಯ ನೀರು ಉಪ್ಪು ಮತ್ತು ಹೈಡ್ರೋಜನ್ ಸಲ್ಫೈಡ್ ಮಿಶ್ರಣವಾಗಿರುವುದರಿಂದ ಉಳಿದ ನೀರಿಗಿಂತಲೂ ಹೆಚ್ಚು ಭಾರ. ಆದುದರಿಂದ ಉಳಿದ ನೀರಿನಲ್ಲಿ ಮಿಕ್ಸ್ ಆಗುವುದಿಲ್ಲ ಮತ್ತು ಹರಿಯುತ್ತದೆ ಕೂಡ. ಆದರೆ ಹೈಡ್ರೋಜನ್ ಸಲ್ಫೈಡ್ ಒಂದು ವಿಷ. ಆದ್ದರಿಂದ ಇದರಲ್ಲಿ ಜಲಚರಗಳು ಇರುವುದಿಲ್ಲ. ಇನ್ನೂ ಅಚ್ಚರಿಗೊಳಿಸುವ ವಿಷಯವೆಂದರೆ, ಸಮುದ್ರದಾಳದಲ್ಲಿ 20 ಮಿಲಿಯನ್ ಪೌಂಡ್ ಬಂಗಾರವೂ ಇದೆಯಂತೆ.
- ಪವಿತ್ರ ಸಚಿನ್