ನವದೆಹಲಿ, ಜೂ. 19: ಭಾರತದ ಕೀರ್ತಿ ಪತಾಕೆಯನ್ನು ದೇಶ ವಿದೇಶದಲ್ಲಿ ಹಾರಿಸುವಂತೆ ಮಾಡಿದ್ದ ದಿಗ್ಗಜ ಅಥ್ಲೀಟ್ ಮಿಲ್ಕಾ ಸಿಂಗ್ (Milkha Singh) ಇನ್ನಿಲ್ಲ. 91 ವರ್ಷದ ಮಿಲ್ಕಾ ಸಿಂಗ್ ಹಾಗೂ ಅವರ ಮಡದಿ ನಿರ್ಮಲ್ ಕೌರ್ ಅವರಿಗೆ ಕಳೆದ ತಿಂಗಳು ಕೊರೋನಾ ಸೋಂಕಾಗಿತ್ತು. ಕಳೆದ ಭಾನುವಾರ ನಿರ್ಮಲ್ ಕೌರ್ ಅವರು ಕೋವಿಡ್ನಿಂದಾಗಿಯೇ ಕೊನೆಯುಸಿರೆಳೆದಿದ್ದರು. ಕಳೆದ ಒಂದು ತಿಂಗಳಿನಿಂದ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಮಿಲ್ಕಾ ಸಿಂಗ್ ಅವರು ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಮತ್ತೆ ಕೊರೋನಾ ಪರೀಕ್ಷೆ ಮಾಡಿ, ಬುಧವಾರ ಅವರನ್ನು ಸಾಮಾನ್ಯ ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು. ಅವರ ಆರೋಗ್ಯ ಸ್ಥಿತಿ ನಿನ್ನೆ ಗಂಭೀರವಾಗಿತ್ತು. ಪಿಜಿಐಎಂಇಆರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲು ಮಾಡಲಾಗಿತ್ತು. ಮಿಲ್ಕಾ ಸಿಂಗ್ ಅವರಿಗೆ ಮತ್ತೆ ಜ್ವರ ಕಾಣಿಸಿಕೊಂಡಿದ್ದು, ಆಮ್ಲಜನಕ ಪ್ರಮಾಣವು ಇಳಿಕೆಯಾಗ ತೊಡಗಿತ್ತು ಎನ್ನಲಾಗಿದೆ.
ನಿನ್ನೆರಾತ್ರಿ 11.30ಕ್ಕೆ ಮಿಲ್ಕಾ ಸಿಂಗ್ ಕೊನೆಯುಸಿರೆಳೆದಿದ್ದಾರೆ. ಗುರುವಾರ ಸ್ಥಿರವಾಗಿದ್ದ ಅವರ ಆರೋಗ್ಯ ಸ್ಥಿತಿ ನಿನ್ನೆ ಸಂಜೆಯಿಂದ ಬಿಗಡಾಯಿಸಿತ್ತು. ಮಿಲ್ಕಾ ಸಿಂಗ್ ಅವರು ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗನನ್ನು ಅಗಲಿದ್ದಾರೆ.
400 ಮೀಟರ್ ಓಟದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದ ಮಿಲ್ಕಾ ಸಿಂಗ್ ಅವರು 1958ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ 200 ಹಾಗೂ 400 ಮೀಟರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ನಾಲ್ಕು ಬಾರಿ ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿದ್ದರು. 1960ರ ರೋಮ್ ಒಲಿಂಪಿಕ್ಸ್‌ನಲ್ಲಿಯೂ ಭಾರತವನ್ನು ಪ್ರತಿನಿಧಿಸಿದ್ದರು.
ಫ್ಲೈಯಿಂಗ್ ಸಿಖ್
1960ರ ರೋಮ್ ಒಲಿಂಪಿಕ್ಸ್‌ನಲ್ಲಿ 400 ಮೀಟರ್ ಅಂತರವನ್ನು 45.6 ಸೆಕೆಂಡ್‌ಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದರು. ಮಿಲ್ಕಾ ಸಿಂಗ್ ಅವರ ಈ ರಾಷ್ಟ್ರೀಯ ದಾಖಲೆಯನ್ನು 1998ರ ಒಲಿಂಪಿಕ್ಸ್‌ನಲ್ಲಿ ಪರಮ್‌ಜೀತ್ ಸಿಂಗ್ ಮುರಿದರು. ಓಟದ ಸ್ಪರ್ಧೆಯಲ್ಲಿ ಆಗ ಹೆಸರು ಮಾಡಿದ್ದ ಕ್ರೀಡಾಪಟು ಅಬ್ದುಲ್ ಖಲೀಕ್ ಅವರನ್ನು ಸೋಲಿಸಿದ ನಂತರ 1960ರಲ್ಲಿ ಪಾಕಿಸ್ತಾನದ ಜನರಲ್ ಅಯೂಬ್ ಖಾನ್, ಮಿಲ್ಕಾ ಸಿಂಗ್ ಅವರಿಗೆ ಫ್ಲೈಯಿಂಗ್ ಸಿಖ್ ಅನ್ನೋ ಬಿರುದನ್ನು ನೀಡಿದ್ದರು. ಅಂದಿನಿಂದ ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾದರು.
ಮಿಲ್ಕಾ ಸಿಂಗ್ ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಮಹಾನ್ ಕ್ರೀಡಾಪಟುವನ್ನು ಕಳೆದುಕೊಂಡಿದ್ದೇವೆ. ಇಡೀ ದೇಶದ ಕಲ್ಪನೆಯ ಮೇಲೆ ಹಿಡಿತ ಸಾಧಿಸಿದ್ದ ಮಿಲ್ಕಾ ಸಿಂಗ್ ಅಸಂಖ್ಯ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದ್ದರು ಎಂದು ಟ್ವೀಟ್ ಮಾಡಿದ್ದಾರೆ.
ಮಿಲ್ಕಾ ಸಿಂಗ್ ಅವರ ನಿಧನಕ್ಕೆ ರಾಜಕೀಯ ನಾಯಕರು, ಕ್ರೀಡಾಪಟುಗಳು ಹಾಗೂ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ನಟ ಶಾರುಖ್ ಖಾನ್, ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್ ಸೇರಿದಂತೆ ಸಾಕಷ್ಟು ಮಂದಿ ಕಂಬನಿ ಮಿಡಿದಿದ್ದಾರೆ
ಭಾಗ್ ಮಿಲ್ಕಾ ಭಾಗ್ ಸಿನಿಮಾ
ಮಿಲ್ಕಾ ಸಿಂಗ್ ಅವರ ಜೀವನದ ಮೇಲೆ ಬಾಲಿವುಡ್ನಲ್ಲೊ ‘ಭಾಗ್ ಮಿಲ್ಕಾ ಭಾಗ್’ ಸಿನಿಮಾವನ್ನು ನಿರ್ಮಿಸಲಾಗಿದೆ. ಫರ್ಹಾನ್ ಅಖ್ತರ್ ಮಿಲ್ಕಾ ಸಿಂಗ್ ಅವರ ಪಾತ್ರದಲ್ಲಿ ನಟಿಸಿ, ಸೈ ಎನಿಸಿಕೊಂಡಿದ್ದಾರೆ.