ಹಲಾಲ್(Halal) ಅನ್ನು ನಿಷೇಧ(Ban) ಮಾಡುವ ಕುರಿತು ಸರ್ಕಾರ(Government) ಚಿಂತನೆ ನಡೆಸಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಚರ್ಚೆ ನಡೆಸಿ ಹಲಾಲ್ ಅನ್ನು ನಿಷೇದ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ(Shashikala Jolle) ಹೇಳಿದರು.

ನಿಪ್ಪಾಣಿಯ ಸಮಾಧಿ ಮಠದಲ್ಲಿ ನಡೆದ ‘ಧಾರ್ಮಿಕ ದಿನಾಚರಣೆ’ಯ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಹಲಾಲ್ ಕಟ್(Halal Cut) ಮಾಡಿ ಮುಸ್ಲಿಂ ದೇವರಿಗೆ ಮಾಂಸ ಅರ್ಪಿಸುವ ವಿಧಾನ ಎಂಬುದು ನಮಗೆ ತಿಳಿದಿದೆ. ಅನೇಕ ಹಿಂದೂ ಸಂಘಟನೆಗಳು ಹಲಾಲ್ ಪದ್ದತಿಯನ್ನು ನಿಷೇಧ ಮಾಡಬೇಕೆಂದು ಒತ್ತಾಯಿಸುತ್ತಿವೆ. ಒಂದು ಧರ್ಮದ ಪದ್ದತಿಯನ್ನು ಎಲ್ಲ ಧರ್ಮದವರ ಮೇಲೆ ಹೇರುವ ಹಲಾಲ್ ಪದ್ದತಿಯನ್ನು ನಿಷೇಧ ಮಾಡಬೇಕು.
ಹಲಾಲ್ ಸರ್ಟಿಫಿಕೆಟ್ ನೀಡುವ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅನೇಕ ಹಿಂದೂಪರ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಈ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದರು. ಇನ್ನು ಪರೋಕ್ಷವಾಗಿ ಹಲಾಲ್ ನಿಷೇಧ ಮಾಡುವ ಮುನ್ಸೂಚನೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ ಅವರು, ಹಿಂದೂ ಸಂಘಟನೆಗಳು ಮಾಡುತ್ತಿರುವ ಒತ್ತಾಯ ಸರಿ ಇದೆ. ಹಲಾಲ್ ಎಂಬುದು ಕೇವಲ ಒಂದು ಧರ್ಮದ ಆಚರಣೆಯಾಗಿದ್ದು, ಎಲ್ಲರ ಮೇಲೆ ಹೇರುವುದು ಸರಿಯಲ್ಲ ಎಂದು ಪರೋಕ್ಷವಾಗಿ ಹೇಳಿದರು.

ಇನ್ನು ಯುಗಾದಿ ಹಬ್ಬವನ್ನು ರಾಜ್ಯ ಸರ್ಕಾರ ‘ಧಾರ್ಮಿಕ ದಿನ’ವನ್ನಾಗಿ ಘೋಷಣೆ ಮಾಡಿದೆ. ಹೀಗಾಗಿ ಪ್ರತಿವರ್ಷ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬೇಕು. ಮುಜರಾಯಿ ಇಲಾಖೆ ವ್ಯಾಪ್ತಿಯಡಿ ಬರುವ ಎಲ್ಲ ದೇವಸ್ಥಾನಗಳು ಕಡ್ಡಾಯವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಧಾರ್ಮಿಕ ಕಾರ್ಯಕ್ರಮಗಳ ರೂಪರೇಷಗಳ ಕುರಿತು ಇಲಾಖೆ ಈಗಾಗಲೇ ಸೂಚನೆಗಳನ್ನು ನೀಡಿದೆ. ಆ ಪ್ರಕಾರ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.