ಚಿಕ್ಕಮಗಳೂರು ಡಿ 18 : ಕಳೆದ ವಾರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಕೆ ಪ್ರಾಣೇಶ್ ಅವರನ್ನು ಸೋಲಿಸುವ ಸಲುವಾಗಿ ಬಿಜೆಪಿಯ ಕೆಲ ನಾಯಕರು ಪ್ರಚಾರ ಮಾಡಿದ್ದರು ಎಂಬ ಆರೋಪದಡಿ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಘಟಕದ ಉಪಾಧ್ಯಕ್ಷ ನಿರಂಜನ್, ರೈತ ಮೋರ್ಚಾ ಕಾರ್ಯದರ್ಶಿ ಪೂರ್ಣೇಶ್ ಮೈಲಿಮನೆ, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯದರ್ಶಿ ಗಿರೀಶ್ಗೆ ಜವಾಬ್ದಾರಿಯಿಂದ ಮುಕ್ತಿಗೊಳಿಸಿ ವಜಾಗೊಳಿಸಲಾಗಿದೆ.
ಬಹಳ ಕಡಿಮೆ ಅಂತರ ಗಳಿಂದ ಎಂಕೆ ಪ್ರಾಣೇಶ್ ಅವರು ಗೆಲವು ಸಾಧಿಸಿದ್ದರು, ಈ ಕುರಿತಾಗಿ ಬಿಜೆಪಿಯ ಜಿಲ್ಲಾಧ್ಯಕ್ಷರಾದ ಕಲ್ಮರುಡಪ್ಪ ಹಾಗೂ ಜಿಲ್ಲೆಯ ಇತರ ಮುಖಂಡರು ಸಭೆ ನಡೆಸಿ ಈ ಕುರಿತಾಗಿ ಅವಲೋಕನ ನಡೆಸಿದಾಗ ಕೆಲ ಪಕ್ಷದಲ್ಲಿರುವ ಮುಖಂಡರುಗಳು ಎಂಕೆ ಪ್ರಾಣೇಶ್ ಅವರ ಪರ ಅಪಪ್ರಚಾರ ಮಾಡಿರುವುದು ತಿಳಿದುಬಂದಿದೆ.
ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಎಂಎಸ್ ನಿರಂಜನ್, ಜಿಲ್ಲಾ ರೈತ ಮೋರ್ಚಾದ ಕಾರ್ಯದರ್ಶಿ ಗಿರೀಶ್ ಹಾಗೂ ಎಸ್ಸಿ ಮೋರ್ಚಾದ ಕಾರ್ಯದರ್ಶಿ ಗಿರೀಶ್ ಹೆಸಗಲ್ ಇವರುಗಳು ಬಿಜೆಪಿಯ ಜವಾಬ್ದಾರಿಯನ್ನು ಹೊಂದಿ ಪಕ್ಷದ ವಿರುದ್ಧವಾಗಿ ಕೆಲಸ ಮಾಡಿರುವುದು ಬೆಳಕಿಗೆ ಬಂದ ನಂತರದಲ್ಲಿ ಜಿಲ್ಲಾಧ್ಯಕ್ಷರಾದ ಕಲ್ಮರುಡಪ್ಪ ಇವರುಗಳನ್ನು ಪಕ್ಷದ ಜವಾಬ್ದಾರಿಯಿಂದ ಕೆಳಗಿಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪಕ್ಷದಲ್ಲಿದ್ದುಕೊಂಡು ದ್ರೋಹ ಬಗೆಯುವವರನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ. ತಕ್ಷಣವೇ ಜಾರಿಗೆ ಬರುವಂತೆ ಈ ಮೂವರನ್ನು ಪಕ್ಷದ ಜವಾಬ್ದಾರಿಗಳಿಂದ ಕೆಳಗಿಳಿಸಲಾಗಿದೆ, ಯಾರೇ ಈ ರೀತಿಯ ಕೃತ್ಯಗಳನ್ನು ಎಸಗಿದರೂ ಕೂಡ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿಯ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ತಿಳಿಸಿದ್ದಾರೆ.
ಈ ಬಾರಿ ಬಿಜೆಪಿಯಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಎಂಕೆ ಪ್ರಾಣೇಶ್ ಸ್ಪರ್ಧಿಸಿ ಗೆದ್ದಿದ್ದಾರೆ. ಇವರಿಗೆ ಟಿಕೆಟ್ ಖಾತ್ರಿ ಮಾಡಿಕೊಂಡರೂ ಗೆಲುವು ಮಾತ್ರ ಅವರು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಈ ಮಧ್ಯೆ ರಣೋತ್ಸಾಹ ತೋರಿದ್ದ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡರ ಛಲ ಕಮಲ ಪಡೆಯನ್ನು ಚಕಿತಗೊಳಿಸಿದ್ದು ಸುಳ್ಳಲ್ಲ. ತೀವ್ರ ಕುತೂಹಲ ಕೆರಳಿಸಿದ್ದ ಮತ ಎಣಿಕೆಯಲ್ಲಿ ಇಬ್ಬರ ನಡುವೆ ಆರಂಭದಿಂದಲೂ ಜಿದ್ದಾಜಿದ್ದಿ ಸ್ಪರ್ಧೆ ನಡೆಯುತ್ತಿತ್ತು. ಅಂತಿಮವಾಗಿ ಪ್ರಾಣೇಶ್ ಗೆಲುವಿನ ನಗೆ ಬೀರಿದರು