Chennai: ಈ ಸಲ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ವಿರುದ್ಧ ಕಾಂಗ್ರೆಸ್ ಸರ್ಕಾರ ಮಾತ್ರವಲ್ಲದೆ ತಮಿಳುನಾಡು (Tamilnadu) ಮುಖ್ಯಮಂತ್ರಿ ಸ್ಟಾಲಿನ್ ಕೂಡ ತಿರುಗಿಬಿದ್ದಿದ್ದಾರೆ.ಕೇಂದ್ರ ಬಜೆಟ್ ನಲ್ಲಿ ಬಿಹಾರ ಮತ್ತು ಆಂಧ್ರ ಪ್ರದೇಶಕ್ಕೆ ಹೆಚ್ಚಿನ ಅನುದಾನ ಹಂಚಿಕೆಯನ್ನು ತೀವ್ರವಾಗಿ ಟೀಕಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (M.K Stalin), ಹೀಗೆ ರಾಜಕೀಯವಾಗಿ ಇಷ್ಟಪಡುವ, ಇಷ್ಟಪಡದ ರೀತಿಯಲ್ಲಿ ಆಡಳಿತ ಮುಂದುವರೆಸಿದರೆ ರಾಜಕೀಯ ಪ್ರತ್ಯೇಕತೆಯ ಅಪಾಯವಿದೆ ಎಂದು ಕಿಡಿ ಕಾರಿದ್ದಾರೆ.

ಈ ರೀತಿಯ ತಾರತಮ್ಯ ನೀತಿ ಅನುಸರಿಸಿ ಮೋದಿ (Modi) ತಮ್ಮ ಮಿತ್ರರನ್ನು ಸಮಾಧಾನಪಡಿಸಬಹುದು ಆದರೆ ಅವರು ದೇಶವನ್ನು ಉಳಿಸಲು ಸಾಧ್ಯವಿಲ್ಲ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಪಾದಿಸಿದ್ದಾರೆ. ಬಜೆಟ್ (Budget)ನಲ್ಲಿ ಕೇಂದ್ರವು ಇತರ ರಾಜ್ಯಗಳ ವಿರುದ್ಧ ತಾರತಮ್ಯ ಮಾಡಿದೆ ಎಂದು ಆರೋಪಿಸಿ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ ಬೆನ್ನಲ್ಲೇ ಸ್ಟಾಲಿನ್ ಈ ಮಾತಿನ ದಾಳಿ ನಡೆಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸಿದವರು ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪಕ್ಷ ರಾಜಕೀಯ ಬೇಡ ಈಗಾಗಲೇ ಚುನಾವಣೆ ಮುಗಿದಿದೆ, ಈಗ ನಾವು ದೇಶದ ಬಗ್ಗೆ ಯೋಚಿಸಬೇಕು. ಆದರೆ, ನಿನ್ನೆಯ ಬಜೆಟ್ 2024 ನಿಮ್ಮ ಆಡಳಿತವನ್ನು ಮಾತ್ರ ಉಳಿಸುತ್ತದೆ, ಭಾರತವನ್ನಲ್ಲ. ರಾಜಕೀಯ ಪಕ್ಷಪಾತ ಆಧಾರದ ಮೇಲೆ ಮೋದಿ ಆಡಳಿತ ಮುಂದುವರಿಸಿದರೆ, ಅವರು ಪ್ರತ್ಯೇಕಗೊಳ್ಳುವ ಅಪಾಯವಿದೆ ಎಂದು ಸ್ಟಾಲಿನ್ ಎಚ್ಚರಿಸಿದ್ದಾರೆ. ತಮಿಳುನಾಡಿಗೆ ಬಿಜೆಪಿ (BJP) ದ್ರೋಹ ಬಗೆದಿದೆ ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ತಮ್ಮ ಫೋಸ್ಟ್ ನ್ನು ಮುಕ್ತಾಯಗೊಳಿಸಿದ್ದಾರೆ.
ಈ ಸಲ ಸಲ್ಲಿಸಿರುವ ಕೇಂದ್ರ ಬಜೆಟ್ ನಲ್ಲಿ ತಮಿಳುನಾಡು ಬೇಡಿಕೆಗಳನ್ನು ನಿರ್ಲಕ್ಷಿಸಿರುವುದರ ವಿರುದ್ಧ ಜುಲೈ 27 ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ನೀತಿ ಆಯೋಗ ಸಭೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಮಂಗಳವಾರ ಸ್ಟಾಲಿನ್ ಪ್ರಕಟಿಸಿದ್ದಾರೆ .ವಿಪತ್ತು ತಡೆಗೆ ರೂ.37,000 ಕೋಟಿ ಅನುದಾನ ಬಿಡುಗಡೆಗೆ ತಮಿಳುನಾಡು ಮನವಿ ಸಲ್ಲಿಸಿತ್ತು. ಆದರೆ ಕೇವಲ ರೂ.276 ಕೋಟಿ ಹಂಚಿಕೆ ಮಾಡಿದೆ. ಇದೇ ಬೇಡಿಕೆ ಇಟ್ಟಿದ್ದ ಬಿಹಾರಕ್ಕೆ 11,500 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.