Tumkur: ತುಮಕೂರು ಕಾಂಗ್ರೆಸ್ನಲ್ಲಿ (Congress) ಅಸಮಾಧಾನ ಭುಗಿಲೆದ್ದಿದ್ದು ಸಚಿವರಾದ ಜಿ. ಪರಮೇಶ್ವರ್ (Minister G. Parameshwar) ಹಾಗೂ ಕೆ.ಎನ್.ರಾಜಣ್ಣ (K. N. Rajanna) ವಿರುದ್ದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ (Gubbi MLA SR Srinivas) ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿ ನಂತರ ಇದೀಗ ತುಮಕೂರಿನಲ್ಲಿಯೂ ಬಣ ರಾಜಕೀಯ ಬಂಡಾಯದ ಸ್ವರೂಪ ಪಡೆಯುತ್ತಿದೆ. ಈ ಬಣ ಬಡಿದಾಟ ಇದೀಗ ಜಾತಿ ಸ್ವರೂಪ ಪಡೆದುಕೊಳ್ಳುತ್ತಿದೆ.

ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಬಾ ಕ್ಷೇತ್ರದಿಂದ (Gubbi Vidhan Sabha Constituency) ಸತತವಾಗಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಸ್.ಆರ್.ಶ್ರೀನಿವಾಸ್ (SR Srinivas) ಶ್ರೀನಿವಾಸ್ ತಮ್ಮ ಸ್ವಂತ ವರ್ಚಸ್ಸಿನಿಂದಲೇ ರಾಜಕಾರಣ ಮಾಡಿಕೊಂಡು ಬಂದವರು. 3 ಬಾರಿ ಜೆಡಿಎಸ್ನಿಂದ (JDS) , ಒಮ್ಮೆ ಕಾಂಗ್ರೆಸ್ (Congress) ಮತ್ತು ಒಮ್ಮೆ ಪಕ್ಷೇತರರಾಗಿ ಗೆದ್ದಿರುವ ಶಾಸಕ ಎಸ್.ಆರ್.ಶ್ರೀನಿವಾಸ್ ಇದೀಗ ಜಿಲ್ಲೆಯ ಹಿರಿಯ ನಾಯಕರ ವಿರುದ್ದವೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ತುಮುಲ್ ( ತುಮಕೂರು ಹಾಲು ಒಕ್ಕೂಟ) ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ತಮ್ಮ ಪತ್ನಿಗೆ ನೀಡುವಂತೆ ಶಾಸಕ ಎಸ್.ಆರ್.ಶ್ರೀನಿವಾಸ್ ಸಚಿವರಾದ ಡಾ.ಜಿ.ಪರಮೇಶ್ವರ ( G. Parameshwar) ಮತ್ತು ಕೆ.ಎನ್.ರಾಜಣ್ಣ ಎದುರು ಭೇಡಿಕೆ ಇಟ್ಟಿದ್ದರು. ಆದರೆ ಶಾಸಕ ಎಚ್.ವಿ.ವೆಂಕಟೇಶ (MLA HV Venkatesh) ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡಿ, ಇದೀಗ ಅವರನ್ನೇ ತುಮುಲ್ ಅಧ್ಯಕ್ಷರನ್ನಾಗಿ ಮಾಡಿರುವುದು ಶಾಸಕ ಎಸ್.ಆರ್.ಶ್ರೀನಿವಾಸ್ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಸಚಿವರ ನಡೆಯನ್ನು ಟೀಕಿಸಿರುವ ಶಾಸಕ ಎಸ್.ಆರ್.ಶ್ರೀನಿವಾಸ್. ತುಮಕೂರು ಜಿಲ್ಲೆಯ ತುಘಲಕ್ ದರ್ಬಾರ್ ನಡೆಯುತ್ತಿದೆ. ಶಾಸಕರ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ತುಮುಲ್ ಅಧ್ಯಕ್ಷರ ಆಯ್ಕೆಯಲ್ಲಿ ನಮ್ಮ ಅಭಿಪ್ರಾಯವನ್ನು ಆಲಿಸಿಲ್ಲ. ಜಿಲ್ಲೆಯಲ್ಲಿ ಹಿಂದುಳಿದ ವರ್ಗ ಮತ್ತು ದಲಿತ ಎಡಗೈ ವರ್ಗಕ್ಕೆ ಅನ್ಯಾಯವಾಗಿದೆ. ಅದೇ ರೀತಿ ಜಿಲ್ಲೆಯ ಲಿಂಗಾಯತರು ಮತ್ತು ಒಕ್ಕಲಿಗರು ಶಾಸಕರೂ ಇದ್ದಾರೆ ಎಂಬುದನ್ನೇ ಮರೆತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ತುಮಕೂರು ಕಾಂಗ್ರೆಸ್ನಲ್ಲಿ ಉಂಟಾಗಿರುವ ಬಿಕ್ಕಟ್ಟು ಇದೀಗ ಬಣ ರಾಜಕೀಯಕ್ಕೆ ದಾರಿ ಮಾಡಿಕೊಟ್ಟಿದೆ. ಕೆ.ಎನ್. ರಾಜಣ್ಣ ಹಾಗೂ ಜಿ. ಪರಮೇಶ್ವರ್ ತೆರೆಮರೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಬಣದಲ್ಲಿದ್ದವರು. ಇದೀಗ ಅಸಮಾಧಾನಗೊಂಡಿರುವ ಶಾಸಕ ಎಸ್.ಆರ್.ಶ್ರೀನಿವಾಸ್ ಡಿಕೆಶಿ ಬಣದತ್ತ ಮುಖ ಮಾಡಿದ್ದಾರೆ. ಒಕ್ಕಲಿಗ ಅಸ್ತ್ರವನ್ನು ಪ್ರಯೋಗಿಸಿದ್ದು, ಈ ಬಂಡಾಯ ಇದೀಗ ಜಾತಿ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ.

ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿಕೆಯನ್ನಿಟ್ಟುಕೊಂಡು ಲೇವಡಿ ಮಾಡಿರುವ ರಾಜ್ಯ ಬಿಜೆಪಿ (State BJP), ಮನೆಯೊಂದು ಮೂರು ಬಾಗಿಲಾಗಿರುವ ಕಾಂಗ್ರೆಸ್ ಇದೀಗ ಮತ್ತೊಂದು ಬಾಗಿಲು ಓಪನ್ ಮಾಡಿಕೊಂಡು ಬೀದಿ ಕಾಳಗಕ್ಕೆ ನಿಂತಿದೆ. ತುಮಕೂರು ಜಿಲ್ಲೆಯ ಇಬ್ಬರು ಸಚಿವರಾದ ಕೆ.ಎನ್. ರಾಜಣ್ಣ ಹಾಗೂ ಜಿ. ಪರಮೇಶ್ವರ್ ಅವರ ತುಘಲಕ್ ದರ್ಬಾರ್ (Tughluq Darbar) ವಿರುದ್ಧ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಸಿಡಿದೆದ್ದಿದ್ದಾರೆ ಗುಬ್ಬಿ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ಕೊಟ್ಟು ಕಾಂಗ್ರೆಸ್ (Congress) ಸೇರಿಸಿಕೊಂಡ ನಾಯಕರು ಚೊಂಬು ಕೊಟ್ಟಿದ್ದಾರೆ. ಇದೀಗ ತುಮಕೂರು ಹಾಲು ಒಕ್ಕೂಟ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ತಮ್ಮ ಪತ್ನಿಗೆ ನೀಡುವಂತೆ ಕೇಳಿದಾಗ ಕಾಂಗ್ರೆಸ್ ನಾಯಕರು ಕೈಗೆ ಚಿಪ್ಪು ಕೊಟ್ಟಿದ್ದಾರೆ ಎಂದಿದೆ.