ಚಿಕ್ಕಮಗಳೂರು ಡಿ 14: ಚಿಕ್ಕಮಗಳೂರು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ರೋಚಕ ಜಯ ಸಾಧಿಸಿದೆ ಆದರೆ ಫಲಿತಾಂಶದ ಬಗ್ಗೆ ಅಸಮಧಾನ ಹೊಂದಿರುವ ಕಾಂಗ್ರೆಸ್ ಚಿಕ್ಕಮಗಳೂರು ವಿಧಾನ ಪರಿಷತ್ ಚುನಾವಣೆಯ ಫಲಿತಾಂಶವನ್ನು ಪ್ರಕಟಿಸದಂತೆ ಕಾಂಗ್ರೆಸ್ ಕೋರ್ಟ್ ಮೊರೆ ಹೋಗಲು ಮುಂದಾಗಿದೆ.
ಇಂದು ನಡೆದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಾಣೇಶ್ ಅವರು 6 ಮತಗಳ ಅಂತರದಿಂದ ಕಾಂಗ್ರೆಸ್ಸಿನ ಗಾಯತ್ರಿ ಶಾಂತೇಗೌಡ ಅವರನ್ನು ಸೋಲಿಸಿದ್ದಾರೆ. 9 ಮಂದಿ ನಾಮನಿರ್ದೇಶನ ಸದಸ್ಯರ ಬೆಂಬಲದಿಂದ ಬಿಜೆಪಿ ಅಭ್ಯರ್ಥಿ ಜಯಗಳಿಸಿದ ಹಿನ್ನೆಲೆಯಲ್ಲಿ ಫಲಿತಾಂಶ ತಡೆ ಹಿಡಿಯಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡಗೆ ಮಾಜಿ ಸಿಎಂ ಸಿದ್ದರಾಮಯ್ಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕರೆ ಮಾಡಿ ಕೂಡಲೇ ನಾಮಿನೇಟೆಡ್ ಸದಸ್ಯರ ವೋಟು ಅಸಿಂಧುಗೊಳಿಸಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಚಿಕ್ಕಮಗಳೂರು ಫಲಿತಾಂಶ ಪೆಂಡಿಂಗ್ ಇಡುವಂತೆ ರಾಜ್ಯ ಚುನಾವಣಾ ಆಯುಕ್ತರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.
6 ಮತದ ಅಂತರದಲ್ಲಿ ಬಿಜೆಪಿ ಗೆದ್ದುಕೊಂಡಿದೆ. ಇಲ್ಲಿ 9 ಮಂದಿ ನಾಮಿನೇಟ್ ಸದಸ್ಯರಿದ್ದಾರೆ. ನಾಮಿನೇಟ್ ಸದಸ್ಯರ ವಿಚಾರ ಕೋರ್ಟ್‌ನಲ್ಲಿ ಇತ್ಯರ್ಥವಾಗಿಲ್ಲ. ಹೀಗಾಗಿ ಈ ಸದಸ್ಯರ ವೋಟು ಅಸಿಂಧುಗೊಳಿಸಿ ಈಗಲೇ ಗೆಲುವನ್ನು ಘೋಷಿಸಬಾರದು ಎನ್ನುವುದು ಕಾಂಗ್ರೆಸ್ ವಾದ.
ಚುನಾವಣೆಗೆ ನೊಂದಣಿಯಾಗಿದ್ದ 2,417 ಮತದಾರರ ಪೈಕಿ 7 ಮಂದಿ ಗೈರಾಗಿದ್ದರು. ಚಲಾವಣೆಯಾದ 2,410 ಮತಗಳ ಪೈಕಿ 39 ಮತಗಳನ್ನು ಅಸಿಂಧುಗೊಳಿಸಲಾಗಿದೆ. ಹೀಗಾಗಿ ಗೆಲುವಿಗೆ 1,186 ಮತಗಳ ಅಗತ್ಯವಿತ್ತು. ಬಿಜೆಪಿಯ ಎಂ.ಕೆ.ಪ್ರಾಣೇಶ್ 1,188 ಮತಗಳನ್ನು ಪಡೆದರೆ ಕಾಂಗ್ರೆಸ್ಸಿನ ಗಾಯತ್ರಿ ಶಾಂತೇಗೌಡ 1,182 ಮತಗಳನ್ನು ಪಡೆದಿದ್ದಾರೆ