Kolkata: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪಶ್ಚಿಮ ಬಂಗಾಳದ ಬ್ಯಾರಕ್ಪೋರ್ನಲ್ಲಿ ಲೋಕಸಭಾ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದು, ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಪಶ್ಚಿಮ ಬಂಗಾಳ (West Bengal) ರಾಜ್ಯಕ್ಕೆ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ.
ನಾನು ಪಶ್ಚಿಮ ಬಂಗಾಳಕ್ಕೆ ಐದು ಗ್ಯಾರಂಟಿಗಳನ್ನು (Guarantee) ನೀಡುತ್ತಿದ್ದೇನೆ. ನಾನು ಇರುವವರೆಗೂ ಧರ್ಮಾಧಾರಿತ ಮೀಸಲಾತಿ ನೀಡಲು ಬಿಡುವುದಿಲ್ಲ. SC, ST, ಅಥವಾ OBC ಯ ಮೀಸಲಾತಿಯನ್ನು ಕಸಿಯಲು ಯಾರಿಗೂ ಬಿಡುವುದಿಲ್ಲ. ರಾಮ ನವಮಿ ಪೂಜೆ ಮಾಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅಯೋಧ್ಯೆಯಲ್ಲಿನ ರಾಮ ಮಂದಿರದ ಕುರಿತು ಸುಪ್ರೀಂಕೋರ್ಟ್ (Supreme court) ನೀಡಿರುವ ತೀರ್ಪನ್ನು ರದ್ದುಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಮತ್ತು ಸಿಎಎ (CAA) ಜಾರಿಗೊಳಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಘೋಷಿಸಿದ್ದಾರೆ.
ಶ್ರೀರಾಮನ ಹೆಸರನ್ನು ಜಪಿಸಿದರೆ, ಟಿಎಂಸಿ (TMC) ಜನರಿಗೆ ಬೆದರಿಕೆ ಹಾಕುತ್ತದೆ. ರಾಮನವಮಿ ಆಚರಿಸಲು ಟಿಎಂಸಿ ಜನರಿಗೆ ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಕೂಡ ರಾಮಮಂದಿರದ ವಿರುದ್ಧ ನಿಂತಿದೆ. ನಾವು ದೇಶವನ್ನು ಟಿಎಂಸಿ, ಕಾಂಗ್ರೆಸ್ ಮತ್ತು ಎಡಪಂಥೀಯರ ಕೈಯಲ್ಲಿ ಬಿಡಬೇಕೇ? ಎಂದು ಪ್ರಶ್ನಿಸಿದ ಮೋದಿ ಅವರು, ಪಶ್ಚಿಮ ಬಂಗಾಳ ಸ್ವಾತಂತ್ರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ ಮಮತಾ ಬ್ಯಾನರ್ಜಿ (Mamatha Banerjee) ನೇತೃತ್ವದ ಟಿಎಂಸಿ ಇದನ್ನು ಹಗರಣಗಳ ಕೇಂದ್ರವನ್ನಾಗಿ ಮಾಡಿದೆ.
ಒಂದು ಕಾಲದಲ್ಲಿ ಬಂಗಾಳದಲ್ಲಿ ವೈಜ್ಞಾನಿಕ ಆವಿಷ್ಕಾರಗಳು ನಡೆಯುತ್ತಿದ್ದವು, ಆದರೆ ಟಿಎಂಸಿ ಆಡಳಿತದಲ್ಲಿ ಇಡೀ ರಾಜ್ಯದಲ್ಲಿ ಬಾಂಬ್ (Bomb) ಉತ್ಪಾದಿಸುವ ಗೃಹ ಉದ್ಯಮವಿದೆ, ಅಕ್ರಮ ವಲಸಿಗರ ವಿರುದ್ಧ ಬಂಗಾಳ ಆಂದೋಲನ ಮಾಡುವ ಸಮಯವಿತ್ತು, ಆದರೆ ಇಂದು ಟಿಎಂಸಿಯ ರಕ್ಷಣೆಯಲ್ಲಿ ಅಕ್ರಮ ವಲಸಿಗರು ಅಭಿವೃದ್ಧಿ ಹೊಂದುತ್ತಿದ್ದಾರೆ ಎಂದು ಆರೋಪಿಸಿದರು.
ಸ್ವಾತಂತ್ರ್ಯದ ನಂತರ, ಕಾಂಗ್ರೆಸ್ ಪಕ್ಷದ ಕುಟುಂಬದ ಸದಸ್ಯರು ದಶಕಗಳ ಕಾಲ ದೇಶವನ್ನು ಆಳಿದರು. ಅವರು ಪೂರ್ವ ಭಾರತದ ರಾಜ್ಯಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಿದರು. ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಅಥವಾ ಒಡಿಶಾ ರಾಜ್ಯಗಳ ಸಾಮರ್ಥ್ಯವನ್ನು ಬಳಸಿಕೊಳ್ಳಲು ಕಾಂಗ್ರೆಸ್ (Congress) ಏನನ್ನೂ ಮಾಡಲಿಲ್ಲ. ಆದರೆ ಇಂದು ನಾವು ಭಾರತದ ಪೂರ್ವ ರಾಜ್ಯಗಳಲ್ಲಿ ರಸ್ತೆಮಾರ್ಗಗಳು, ರೈಲುಮಾರ್ಗಗಳು ಮತ್ತು ಜಲಮಾರ್ಗಗಳ ಜಾಲವನ್ನು ರಚಿಸುತ್ತಿದ್ದೇವೆ ಸರಕು ಸಾಗಣೆ ಕಾರಿಡಾರ್ಗಳು ಈ ಪ್ರದೇಶದಲ್ಲಿ ಕೈಗಾರಿಕೀಕರಣವನ್ನು ಹೆಚ್ಚಿಸಿವೆ. ಮುಂಬರುವ ವರ್ಷಗಳು ಪಶ್ಚಿಮ ಬಂಗಾಳ ಮತ್ತು ಸುತ್ತಮುತ್ತಲಿನ ಅಭಿವೃದ್ಧಿಗೆ ಸಮರ್ಪಿಸಲ್ಪಡುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು.