Karnataka: ರಾಜ್ಯದಿಂದ ಆರಿಸಿಹೋಗಿರುವ ಬಿಜೆಪಿ(BJP) 25 ಲೋಕಸಭಾ ಸದಸ್ಯರು ಮತ್ತು ಆರು ರಾಜ್ಯಸಭಾ ಸದಸ್ಯರಿದ್ದಾರೆ. ಇವರಲ್ಲಿ ಯಾರೋಬ್ಬರು ರಾಜ್ಯದ ಬೇಡಿಕೆಗಳ ಬಗ್ಗೆಯಾಗಲಿ, ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆಯಾಗಲಿ(Modi Govt Ignored Karnataka) ಎಲ್ಲಿಯೂ ಸೊಲ್ಲೆತ್ತಿಲ್ಲ, ಇದರಿಂದಾಗಿ ಕೇಂದ್ರ ಸರ್ಕಾರ ಕೂಡಾ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಆರೋಪಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್(Tweet) ಮಾಡಿರುವ ಅವರು, ಸಾಮಾನ್ಯವಾಗಿ ಬಜೆಟ್ ಪೂರ್ವದಲ್ಲಿ ರಾಜ್ಯದ ಮುಖ್ಯಮಂತ್ರಿ ದೆಹಲಿಗೆ ತೆರಳಿ ಸಂಸತ್ ಸದಸ್ಯರ ಜೊತೆ ಸಮಾಲೋಚನೆ ನಡೆಸಿ ರಾಜ್ಯದ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಡುವುದು ರೂಢಿ.
ಆದರೆ ಈ ಬಾರಿ ಈ ಸಂಪ್ರದಾಯವನ್ನು ಮುರಿಯಲಾಗಿದೆ. ಕೇಂದ್ರ ಸರ್ಕಾರದ ಅಡಿಯಾಳಿನಂತೆ ವರ್ತಿಸುತ್ತಿರುವ ರಾಜ್ಯ ಸರ್ಕಾರ ರಾಜ್ಯದ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನಸೆಳೆಯಲು ಸಂಪೂರ್ಣ ವಿಫಲವಾಗಿದೆ.
ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್(Nirmala Sitharaman) ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ದರೂ ಅವರು ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ.
ಒಂದೆರಡು ಬಾರಿ ಕರ್ನಾಟಕದ ಹೆಸರನ್ನು ಉಲ್ಲೇಖಮಾಡಿದ ಹೊರತಾಗಿ ವಿಶೇಷ ನೆರವಿನ ಘೋಷಣೆಗಳನ್ನು ಮಾಡಿಲ್ಲ ಎಂದು ಟೀಕಿಸಿದ್ದಾರೆ.

ಇನ್ನೊಂದು ಟ್ವೀಟ್ನಲ್ಲಿ, ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರವೇ ಶೇಕಡಾ 50ರಷ್ಟು ಮನೆಗಳನ್ನು ನಿರ್ಮಿಸಲಾಗಿಲ್ಲ.
ಬಹಳ ಮುಖ್ಯವಾಗಿ ನಗರ ಪ್ರದೇಶದಲ್ಲಿರುವ ಕೊಳಗೇರಿ ನಿವಾಸಿಗಳ ವಸತಿ ಸಮಸ್ಯೆಯನ್ನು ಪರಿಹರಿಸುವ ಪ್ರಸ್ತಾಪ ಬಜೆಟ್ ನಲ್ಲಿ ಇಲ್ಲ.
ಪ್ರಧಾನ ಮಂತ್ರಿ ಆವಾಸ್ ಯೋಜನಾ ವೆಚ್ಚವನ್ನು ಶೇಕಡಾ 66ರಷ್ಟು ಹೆಚ್ಚಿಸಲಾಗಿದೆ.
ಪ್ರತಿಮನೆ ನಿರ್ಮಾಣ ವೆಚ್ಚವನ್ನು ರೂ.48,000 ರೂಪಾಯಿಗಳಿಂದ ರೂ.79,590 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಈ ಹೆಚ್ಚಳ ಬಡ ಕುಟುಂಬಗಳಿಗೆ ನೆರವಾಗುವುದಕ್ಕೋ? ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲಿಕ್ಕೋ ?
ಇದನ್ನೂ ಓದಿ: ಕೇಂದ್ರ ಬಜೆಟ್ 2023 : ಇಲ್ಲಿದೆ ಸೀತಾರಾಮನ್ ನೀಡಿರುವ ಭರವಸೆಗಳ ಲೆಕ್ಕ
ಎಲ್ ಪಿಜಿ (LPG)ಸಬ್ಸಿಡಿಯನ್ನು ಶೇಕಡಾ 75ರಷ್ಟು ಕಡಿತಗೊಳಿಸಲಾಗಿದೆ. 2022-23ರಲ್ಲಿ ರೂ.9,170 ಕೋಟಿಗಳಷ್ಟಿದ್ದ ಎಲ್ಪಿಜಿ ಸಬ್ಸಿಡಿಯನ್ನು 2023-24ರ ಸಾಲಿಗೆ ರೂ.2,257 ಕೋಟಿಗೆ ಇಳಿಸಲಾಗಿದೆ.
ನರೇಗಾ ಯೋಜನೆಗೆ ಶೇಕಡಾ 32ರಷ್ಟು ಕಡಿಮೆ ಅನುದಾನ ನಿಗದಿಪಡಿಸಲಾಗಿದೆ. 2022-23ರಲ್ಲಿ ರೂ.89,154 ಕೋಟಿ ಗಳಷ್ಟು ನೀಡಲಾಗಿದ್ದ ಅನುದಾನವನ್ನು 2023-24ರ ಸಾಲಿನಲ್ಲಿ ರೂ.61,032 ಕೋಟಿಗೆ ಇಳಿಸಲಾಗಿದೆ.
ಆಹಾರ ಸಬ್ಸಿಡಿಯನ್ನು ಶೇಕಡಾ 31ರಷ್ಟು ಕಡಿಮೆ ಮಾಡಲಾಗಿದೆ. 2022-23ರಲ್ಲಿ ರೂ.2,87,194 ಕೋಟಿಯಷ್ಟು ಆಹಾರ ಸಬ್ಸಿಡಿ ನೀಡಲಾಗಿತ್ತು.

ಈ ಬಾರಿ ಅದನ್ನು ರೂ.1,97,350 ಕೋಟಿಗೆ ಇಳಿಸಲಾಗಿದೆ. ಕೃಷ್ಣಾ ಮೇಲ್ದಂಡೆ, ಮಹದಾಯಿ, ಮೇಕೆದಾಟು ಯೋಜನೆಗಳಿಗೆ ಪೈಸೆ ಹಣವನ್ನೂ ನೀಡಿಲ್ಲ.
ಉಪನಗರ ರೈಲ್ವೆ ಮತ್ತು ಮೆಟ್ರೋ ರೈಲು ಯೋಜನೆಗೆ ಹೆಚ್ಚಿನ ಅನುದಾನ ನೀಡಬಹುದೆಂಬ ನಿರೀಕ್ಷೆ ಇತ್ತು ಅದೂ ಸುಳ್ಳಾಗಿದೆ.
ಬಹಳ ಮುಖ್ಯವಾಗಿ ಕೃಷ್ಣಾ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿರುವ ಈ ಯೋಜನೆ ಅನುಷ್ಠಾನಗೊಳ್ಳಬೇಕಾದರೆ ‘ಬಿ ಸ್ಕೀಮ್’ ಗೆ ಸಂಬಂಧಿಸಿದ ವ್ಯಾಜ್ಯ ಇತ್ಯರ್ಥವಾಗಬೇಕು.
ಅಲ್ಲಿಯ ವರೆಗೆ ಈ ಹಣವನ್ನು ಖರ್ಚು ಮಾಡುವ ಹಾಗಿಲ್ಲ ಎಂದಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿರುವ ಹಣದಲ್ಲಿ 40% ಕಮಿಷನ್ ಕಳೆದರೆ ಕೊನೆಗೆ ಯೋಜನೆಗೆ ಸಿಗಲಿರುವುದು ರೂ.3000 ಕೋಟಿಗಿಂತಲೂ ಕಡಿಮೆ.
ನಿಗದಿ ಪಡಿಸಿರುವ ಹಣ ಕೂಡಾ ಒಂದು ವರ್ಷಕ್ಕೋ ಐದು ವರ್ಷಕ್ಕೋ ಎನ್ನುವದನ್ನೂ ಸ್ಪಷ್ಟಪಡಿಸಿಲ್ಲ. ಭದ್ರ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ ರೂಪಾಯಿಯನ್ನು ನಿಗದಿಪಡಿಸಲಾಗಿದೆ.
ಈ ಯೋಜನೆ ಪೂರ್ಣಗೊಳ್ಳಬೇಕಾದರೆ ರೂ.23,000 ಕೋಟಿ ಅವಶ್ಯಕತೆಯಿದೆ. ಕೇಂದ್ರದ ಸರ್ಕಾರ ನೀಡಲು ಒಪ್ಪಿರುವುದು ಯೋಜನಾ ವೆಚ್ಚದ ಕಾಲುಭಾಗ ಮಾತ್ರ.
ಇದನ್ನೂ ಓದಿ: ಕೇಂದ್ರ ಬಜೆಟ್: ಕರ್ನಾಟಕಕ್ಕೆ ಬಂಪರ್‌ಕೊಡುಗೆ ; ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ
ಹತ್ತಿಬೆಳೆಯನ್ನು ಹೊರತುಪಡಿಸಿದರೆ ಬೇರೆ ಯಾವ ಬೆಳೆಗಳಿಗೂ ಬೆಳೆ ಕೇಂದ್ರಿತ ಯೋಜನೆಗಳು ಬಜೆಟ್ ನಲ್ಲಿ ಇಲ್ಲ. ತೋಟಗಾರಿಕಾ ಬೆಳೆಗಳನ್ನು ಪ್ರಸ್ತಾಪ ಮಾಡಲಾಗಿದ್ದರು ಅಲ್ಲಿಯೂ ಬೆಳೆ ಕೇಂದ್ರಿತ ಯೋಜನೆ ಇಲ್ಲ.
ಉದಾಹರಣೆಗೆ ತೆಂಗು, ಅಡಿಕೆ ಇತ್ಯಾದಿ ಬೆಳೆಗಳಿಗೆ ನಿರ್ಧಿಷ್ಟ ಯೋಜನೆಗಳನ್ನು ಹೇಳಿಲ್ಲ. ರೈತರಿಗೆ ಸಾಲ ನೀಡಲು ಎರಡು ಲಕ್ಷ ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
ರೈತರನ್ನು ಋಣಮುಕ್ತಗೊಳಿಸಬೇಕಾಗಿರುವ ಸರ್ಕಾರ ಅವರನ್ನು ಇನ್ನಷ್ಟು ಸಾಲದ ಬಲೆಗೆ ನೂಕಲು ಹೊರಟಿದೆ. ಹೊಸ ಸಾಲ ಪಡೆದು ಹಳೆಸಾಲ ತೀರಿಸಿ ಎನ್ನುವುದನ್ನು ಸರ್ಕಾರ ಹೇಳಿದೆ. ಈ ಸಾಲದ ಬಡ್ಡಿದರ ಎಷ್ಟು ಎನ್ನುವುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.