ಬೆಂಗಳೂರು, ಮೇ. 17: ದೇಶದಲ್ಲಿ ಆಂತಕ ಮೂಡಿಸಿರುವ ಮಹಾಮಾರಿ ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸುವ ಕಾಂಗ್ರೆಸ್, ಇದೀಗ ಕೋವಿಡ್ ವಿರುದ್ಧದ ಹೋರಾಟಕ್ಕೆ ಅನಿವಾರ್ಯ ಎನ್ನಲಾದ ಲಸಿಕೆಯನ್ನು ಹೊರದೇಶಗಳಿಗೆ ರಫ್ತು ಮಾಡಿರುವ ಪ್ರಧಾನಿ ನರೇಂದ್ರ ಮೋದಿ ನಡೆಯನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಅಭಿಯಾನ ಆರಂಭಿಸಿದೆ.
“ನಮ್ಮ ಮಕ್ಕಳ ಲಸಿಕೆಯನ್ನು ಹೊರದೇಶಕ್ಕೆ ಏಕೆ ಕಳಿಸಿದರಿ?” ಎಂದು ಪ್ರಶ್ನಿಸುವ ಪ್ರೊಫೈಲ್ ಪಿಕ್ಚರ್‌ಗಳನ್ನು ಕಾಂಗ್ರೆಸ್ ನಾಯಕರು ತಮ್ಮ ಜಾಲತಾಣಗಳ ಖಾತೆಗೆ ಅಪ್‌ಲೋಡ್ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧದ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಆರಂಭವಾದ ಈ ಅಭಿಯಾನ ಇದೀಗ ನಿಧಾನವಾಗಿ ವ್ಯಾಪಿಸುತ್ತಿದ್ದು, ಬಹುತೇಕ ಕಾಂಗ್ರೆಸ್ ನಾಯಕರು ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. ಕಪ್ಪು ಹಿಂಬಣ್ಣವನ್ನು ಹೊಂದಿರುವ ಈ ಪಿಕ್ಚರ್ ಭಾರತದಲ್ಲಿ ಕೋವಿಡ್ ಲಸಿಕೆಯ ಕರಾಳತೆಯನ್ನು ಸೂಚಿಸುವಂತಿದೆ.