- ನೆರೆಯ ರಾಷ್ಟ್ರಗಳಲ್ಲಿ ಸಂಭವಿಸಿದ ಗಲಭೆಗಳನ್ನು ಉದಾಹರಣೆಯಾಗಿ ನೀಡಿ ಎಚ್ಚರಿಕೆ
- ಸಂಸ್ಕೃತಿ ಮತ್ತು ಜೀವನ ಶೈಲಿ ಮಾತ್ರ ನಮ್ಮ ಸಾಮರ್ಥ್ಯ ಮತ್ತು ಬಲ (Mohan Bhagwats warning to Indians)
- ಆರ್‌ಎಸ್‌ಎಸ್ ಶತಮಾನೋತ್ಸವ ಆಚರಣೆಯಲ್ಲಿ ಗಮನ ಸೆಳೆದ ಮೋಹನ್ ಭಾಗವತ್ ಹೇಳಿಕೆ
Nagpur: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾರತದಲ್ಲಿಯೂ ಅಶಾಂತಿ ಹುಟ್ಟುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ನೆರೆಯ ದೇಶಗಳಲ್ಲಿ ಕಂಡ ಅಶಾಂತಿ,
ಗಲಭೆ, ಅಸ್ಥಿರತೆ ಎಲ್ಲವೂ ಸರ್ಕಾರ ಮತ್ತು ಸಮಾಜದ ನಡುವಿನ ಸಂಪರ್ಕದ ಕೊರತೆಯಿಂದಾಗಿ ಉಂಟಾಗಿವೆ ಎಂದು ಅವರು ಹೇಳಿದ್ದಾರೆ. ಭಾರತದಲ್ಲೂ ಕೆಲ ಶಕ್ತಿಗಳು ಇದೇ ರೀತಿಯ ಪರಿಸ್ಥಿತಿ ಸೃಷ್ಟಿಸಲು ಪ್ರಯತ್ನಿಸುತ್ತಿವೆ.
ಸರ್ಕಾರ ಮತ್ತು ಜನರ ನಡುವೆ ನಂಟು ಕಡಿಮೆಯಾದರೆ, ನಮ್ಮಲ್ಲೂ ಇದೇ ಸ್ಥಿತಿ ಎದುರಾಗಬಹುದು ಎಂದು ಭಾಗವತ್ ಎಚ್ಚರಿಕೆ ನೀಡಿದರು.
ವಿಜಯದಶಮಿ ಹಾಗೂ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಭಾಗವತ್ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆದ ಗಲಭೆಗಳನ್ನು ಉದಾಹರಣೆಯಾಗಿ ನೀಡಿದ್ದಾರೆ.

ಅಲ್ಲಿ ಜನರು ಅಸಮಾಧಾನಗೊಂಡಿದ್ದು, ಸರ್ಕಾರ–ಸಮಾಜ ನಡುವೆ ಸಂಪರ್ಕ ಕಡಿಮೆಯಾಗಿತ್ತು. ಆಡಳಿತದ ದುರ್ಬಲತೆ ಸಹ ಪ್ರಮುಖ ಕಾರಣ. ಹಿಂಸೆಯಿಂದ ಶಾಶ್ವತ ಬದಲಾವಣೆ ಸಾಧ್ಯವಿಲ್ಲ.
ಬದಲಾವಣೆ ಪ್ರಜಾಪ್ರಭುತ್ವದ ವಿಧಾನಗಳಿಂದಲೇ ಸಾಧ್ಯ. ಸರ್ಕಾರಗಳು ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದರು. ಭಾಗವತ್ ಪಹಲ್ಗಾಂ ದಾಳಿಯನ್ನೂ ಪ್ರಸ್ತಾಪಿಸಿ 26 ಮಂದಿಯನ್ನು
ಧರ್ಮ ಪರಿಶೀಲನೆ ಮಾಡಿ ಕೊಂದ ಘಟನೆ ಭಾರೀ ನೋವು ಮತ್ತು ಕೋಪ ತಂದಿತು. ನಾವು ಇತರ ರಾಷ್ಟ್ರಗಳ ಜೊತೆ ಸ್ನೇಹ ಸಂಬಂಧ ಉಳಿಸಿಕೊಂಡಿದ್ದೇವೆ ಮತ್ತು ಮುಂದುವರೆಸುತ್ತೇವೆ.
ಆದರೆ ಭದ್ರತೆ ವಿಷಯ ಬಂದಾಗ ಹೆಚ್ಚು ಜಾಗರೂಕರಾಗಬೇಕು. ಈ ದಾಳಿಯ ನಂತರ ಬೇರೆ ದೇಶಗಳ ಪ್ರತಿಕ್ರಿಯೆಗಳು ಯಾರು ನಿಜವಾದ ಸ್ನೇಹಿತರು ಎಂಬುದನ್ನು ಬಹಿರಂಗಪಡಿಸಿವೆ ಎಂದು ಹೇಳಿದರು.
ಅಲ್ಲದೆ ಭಾಗವತ್ ಹಿಂದೂ ಸಮಾಜದ ಶಕ್ತಿ ಹಾಗೂ ಗುಣಲಕ್ಷಣಗಳ ಬಗ್ಗೆ ಮಾತನಾಡಿದರು. ಒಡೆದ ಮನೆ ಎಂದಿಗೂ ಒಗ್ಗಟ್ಟಾಗಲಾರದು. ಹಿಂದೂ ಸಮಾಜ ಹೊಣೆಗಾರಿಕೆಯುಳ್ಳದು, ಏಕತೆಯುಳ್ಳದು.
ಪ್ರತಿಯೊಬ್ಬರೂ ವಿಶಿಷ್ಟರಾಗಿದ್ದರೂ ಒಟ್ಟಾಗಿ ಸಮಾಜ ಶಕ್ತಿಯಾಗುತ್ತದೆ. ಇತಿಹಾಸದಲ್ಲಿ ಹಲವಾರು ಆಕ್ರಮಣಕಾರರು ಬಂದು ಹೋಗಿದ್ದಾರೆ, ಆದರೆ ನಮ್ಮ ಸಂಸ್ಕೃತಿ ಮತ್ತು ಬದುಕಿನ ಶೈಲಿ ನಮ್ಮನ್ನು ಉಳಿಸಿದೆ.
ಸಂಸ್ಕೃತಿಯೇ ನಮ್ಮ ಶಕ್ತಿ ಎಂದು ಹೇಳಿ ಸ್ವದೇಶಿ ಮತ್ತು ಸ್ವಾವಲಂಬನೆಯ ಮಹತ್ವವನ್ನು ಹಂಚಿಕೊಂಡರು. ದೇಶವು ವಿದೇಶಿ ಸಹಾಯದ ಮೇಲೆ ಅವಲಂಬಿಸಬಾರದು. ಸ್ವಾವಲಂಬನೆ ನಮ್ಮ ಗುರಿಯಾಗಬೇಕು.
ನಮ್ಮ ಸಂಪನ್ಮೂಲಗಳು, ಸಾಮರ್ಥ್ಯವೇ ಭವಿಷ್ಯ ನಿರ್ಧರಿಸುತ್ತವೆ ಎಂದರು. ಇನ್ನು ಈ ಸಂದರ್ಭದಲ್ಲಿ ಆರ್‌ಎಸ್‌ಎಸ್‌ಗೆ 100 ವರ್ಷ ಪೂರೈಸಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶೇಷ ಅಂಚೆ ಚೀಟಿ
ಮತ್ತು ₹100 ನಾಣ್ಯ ಬಿಡುಗಡೆ ಮಾಡಿದರು. ನಾಣ್ಯದ ಮೇಲೆ ಭಾರತ ಮಾತೆಯ ಚಿತ್ರವನ್ನು ಅಚ್ಚು ಮಾಡಲಾಗಿದೆ. ಇದು ಸಂಘದ ದೀರ್ಘ ಪಯಣಕ್ಕೆ ವಿಶೇಷ ಗೌರವ ಸೂಚಕವಾಗಿದೆ. (Mohan Bhagwats warning to Indians)