ಕೋಲಾರ, ಜೂ. 5: ಕೋಲಾರ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಗಾಳಿ ಸಹಿತ ಮಳೆಯಿಂದಾಗಿ ಈಗ ತಾನೆ ಬಿತ್ತನೆ ಆರಂಭಿಸಿರುವ ರೈತರು ಸಂತಸ ವ್ಯಕ್ತಪಡಿಸಿದ್ದಾರೆ, ಆದರೆ ಕೋಲಾರದ ಮಲ್ಲಸಂದ್ರ ಗ್ರಾಮದಲ್ಲಿ ಜೋರು ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಹತ್ತಾರು ಎಕರೆಯ ತೋಟಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ರೈತರು ಬೆಳೆದಿದ್ದ ಟೊಮೆಟೊ , ಕ್ಯಾಪ್ಸಿಕಂ , ಹೂ ತೋಟಗಳಲ್ಲಿ ಅಪಾರ ಪ್ರಮಾಣದ ಬೆಳೆ ನೀರಲ್ಲಿ ಮುಳುಗಿದೆ. ನಿರಂತರ ಮಳೆಯಿಂದ ಗ್ರಾಮದಲ್ಲಿ ದೊಡ್ಡ ಕಾಲುವೆಗಳು ತುಂಬಿ ಹರಿಯುತ್ತಿದ್ದು, ಗ್ರಾಮದ ಕೆರೆಗೆ ಅಪಾರ ಪ್ರಮಾಣದ ನೀರು ಹರಿದಿದೆ.
ಇನ್ನು ಈಗಾಗಲೇ ತರಕಾರಿ ಹಾಗು ಹೂ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದು, ಅದರ ಜೊತೆಗೆ ಮಳೆ ನೀರು ತೋಟಗಳಿಗೆ ನುಗ್ಗಿದ್ದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಲ್ಲಸಂದ್ರ ಗ್ರಾಮದಲ್ಲಿ ಚರಂಡಿ ವ್ಯವಸ್ತೆ ಸಮರ್ಪಕವಾಗಿ ಇಲ್ಲದ ಕಾರಣ , ಜೋರು ಮಳೆಯಿಂದಾಗಿ ಸಣ್ಣ ಸಣ್ಣ ರಸ್ತೆಗಳೆಲ್ಲ ಕಾಲುವೆಯಂತಾಗಿದೆ. ಕೆಲ ಮನೆಗಳಿಗೆ ಮಳೆನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಮನೆಗಳಿಗೆ ತೆರಳುವ ದಾರಿಗಳೇ ಕಾಣೆಯಾಗಿತ್ತು. ಮಳೆಯನ್ನು ಲೆಕ್ಕಿಸದೆ ತಮ್ಮ ಮನೆ ಮುಂಭಾಗದ ಹಳ್ಳಗಳಲ್ಲಿ ತುಂಬಿದ್ದ ನೀರು ಸರಾಗವಾಗಿ ಸಾಗಲು ಜನರು ಹರಸಾಹಸ ಪಟ್ಟರು. ಗ್ರಾಮಸ್ಥರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು ರಸ್ತೆಬದಿ ಚರಂಡಿ ನಿರ್ಮಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನ ಆಗ್ರಹಿಸಿದ್ದಾರೆ.
ನಗರದಲ್ಲಿ ಸುರಿದ ಜೋರು ಮಳೆಯಿಂದಾಗಿ, ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ನಗರ ವಾಸಿಗಳು ಪರದಾಡಿದ್ದಾರೆ, ರಹಮತ್ ನಗರದ ವಾರ್ಡ್ ನಂಬರ್ 30 ಮತ್ತು 31, 32 ರಲ್ಲಿ, ಮಳೆಯಿಂದಾಗಿ, ಮನೆಗಳಿಗೆ ಮಳೆ ನೀರಿನ ಜೊತೆಗೆ ಚರಂಡಿ ನೀರು ನುಗ್ಗಿದೆ, ಗಬ್ಬು ನಾರುತ್ತಿದ್ದ ನೀರು ಹೊರಹಾಕಲು ನಿವಾಸಿಗಳು ಹಾಗು ಮಕ್ಕಳು ಹರಸಾಹಸ ಪಟ್ಟಿದ್ದಾರೆ, ರಾತ್ರಿ 8 ಗಂಟೆ ವೇಳೆಗೆ ಮಳೆಯು ನಿಂತ ಕಾರಣ ರಾತ್ರಿಯಿಡಿ ನಿವಾಸಿಗಳು ನಿದ್ದೆಗೆಟ್ಟು ಮಳೆನೀರನ್ನು ಹೊರಹಾಕುವುದರಲ್ಲಿ ದಿನ ಕಳೆದಿದ್ದಾರೆ. ಒಟ್ಟಿನಲ್ಲಿ ಮಳೆ ಬಂದಾಗಲೆಲ್ಲ ಕೋಲಾರ ನಗರ ಪ್ರದೇಶದ ಹಲವುಕಡೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುವ ವಿಚಾರ ತಿಳಿದಿದ್ದರು, ನಗರಸಭೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಗರ ವಾಸಿಗಳು ಅಧಿಕಾರಿಗಳಿಗೆ ಹಿಡಿಶಾಪಾ ಹಾಕಿದ್ದಾರೆ.
ಇನ್ನು ಜೋರು ಮಳೆಯಿಂದಾಗಿ ಕೋಲಾರದ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಗೆ ಮಳೆ ನೀರು ನುಗ್ಗಿದೆ, ಮಳೆ ನೀರನ್ನು ಲೆಕ್ಕಿಸದೆ ರೋಗಿಗಳು ಹಾಗು ಸಾರ್ವಜನಿಕರು ಹಾಗೆಯೇ ಓಡಾಡಿದ್ದು ಕಂಡುಬಂತು, ಲ್ಯಾಬ್ ಬಳಿಯ ಮಳೆ ನೀರಿನ ಪೈಪ್ ಬ್ಲಾಕ್ ಆಗಿ ಒಳಗೆ ನೀರು ನುಗ್ಗಿದ್ದು, ಆಸ್ಪತ್ರೆಯ ಲ್ಯಾಬ್ ಹಾಗೂ ರಿಸೆಪ್ಷನ್ ವಿಭಾಗ ಸಂಪೂರ್ಣ ನೀರು ಮಯವಾಗಿತ್ತು.