ಪುಟ್ಟ ಕೈ, ಕಾಲು ಅಲುಗಾಡಿಸುತ್ತ ಪಿಳಿ ಪಿಳಿ ಕಣ್ಣು ಬಿಡುವ ಪುಟ್ಟ ಮಗು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಆದರೆ ಈ ನವಜಾತ ಶಿಶುಗಳು ನಾವು ಅಂದುಕೊಂಡಷ್ಟು ಸರಳವಾಗಿರುವುದಿಲ್ಲ. ಅವರ ಬಗ್ಗೆ ನಮಗೆ ಗೊತ್ತಿಲ್ಲದ ಆಶ್ಚರ್ಯಕರ ಸಂಗತಿಗಳು ಬಹಳಷ್ಟಿವೆ.
ನವಜಾತ ಶಿಶುಗಳ ಕಣ್ಣೀರಿನ ನಾಳಗಳು ಮುಚ್ಚಲ್ಪಟ್ಟಿರುತ್ತವೆ, ಹಾಗಾಗಿ ನವಜಾತ ಶಿಶುಗಳು ಅಳುವಾಗ ಕಣ್ಣೀರು ಬರುವುದಿಲ್ಲ. ಇದು ಒಂದರಿಂದ ಮೂರನೇ ತಿಂಗಳಿನವರೆಗೂ ಇರುತ್ತದೆ. ಮೂರನೇ ತಿಂಗಳ ನಂತರವಷ್ಟೇ ಕಣ್ಣೀರು ಉತ್ಪಾದನೆಯಾಗುತ್ತದೆ. 3 ತಿಂಗಳವರೆಗೆ ನವಜಾತ ಶಿಶುಗಳ ಕಣ್ಣಿನಲ್ಲಿ ಒಸರುವ ದ್ರವ ಕಣ್ಣೀರಲ್ಲ, ಅದು ಕಣ್ಣನ್ನು ನಯವಾಗಿಸಲು ಉತ್ಪಾದನೆಯಾಗುವ ಕೇವಲ ಒಂದು ದ್ರವವಷ್ಟೇ. ಇನ್ನು ನವಜಾತ ಶಿಶುವಿಗೆ 215 ಮೂಳೆಗಳಿರುತ್ತವೆ. ಇದು ವಯಸ್ಕರಿಗಿಂತ ಸುಮಾರು 9 ಮೂಳೆಗಳಷ್ಟು ಹೆಚ್ಚು. ನವಜಾತ ಶಿಶುಗಳು ಹೊಂದಿರುವ ಈ ಮೂಳೆಗಳು ಕುತೂಹಲಕ್ಕೆ ಕಾರಣವಾಗಿದೆ.
ಅವು ಕಾಲಾನಂತರದಲ್ಲಿ ವಿಲೀನಗೊಳ್ಳುತ್ತವೆ, ಆಗ ದೇಹದಲ್ಲಿನ ಮೂಳೆಗಳ ಸಂಖ್ಯೆ ಕಡಿಮೆಯಾಗುತ್ತದೆ. ಶಿಶುಗಳ ಹೃದಯ ಬಡಿತ ನಿಮಿಷಕ್ಕೆ 130-160 ಬೀಟ್ಸ್, ಸರಾಸರಿ ವಯಸ್ಕರಿಗಿಂತ ಎರಡು ಪಟ್ಟು ಹೆಚ್ಚು. ಮಗು ಬೆಳೆದಂತೆ ಹೃದಯ ಬಡಿತದ ಕ್ರಮೇಣ ಕಡಿಮೆಯಾಗುತ್ತದೆ. ಅಂತಿಮವಾಗಿ ನಿಮಿಷಕ್ಕೆ ಸುಮಾರು 70 ಬೀಟ್‌ಗಳಿಗೆ ನಿಲ್ಲುತ್ತದೆ. ಹಾಗಾಗಿ, ನಿಮ್ಮ ಮಗುವಿಗೆ ಸಾಮಾನ್ಯಕ್ಕಿಂತ ಹೆಚ್ಚಿನ ಹೃದಯ ಬಡಿತವಿದ್ದರೆ ಭಯಪಡಬೇಡಿ.
ಇನ್ನು ಶಿಶುಗಳ ಮೊಣಕಾಲುಗಳು ಕಾರ್ಟಿಲೆಜ್ನಿಂದ ಮಾಡಪಟ್ಟಿರುತ್ತವೆ. ಅವುಗಳು ತುಂಬಾ ಮೃದುವಾಗಿ ತೆಳುವಾಗಿರುವ ಕಾರಣ ಅವುಗಳನ್ನು ಎಕ್ಸರೆಗಳಿಂದ ನೋಡಲಾಗುವುದಿಲ್ಲ. ಮೊಣಕಾಲುಗಳು ಕಾರ್ಟಿಲೆಜ್ ಆಗಿ ಪ್ರಾರಂಭವಾಗುತ್ತವೆ ಮತ್ತು ನಂತರ ಅವು ತಾಯಿಯ ಗರ್ಭದ ಹೊರಗೆ ಬಂದ ಮುಂದಿನ ವರ್ಷಗಳಲ್ಲಿ ಬೆಳವಣಿಗೆಯಾಗುತ್ತವೆ. ಇದು ಅವರು ನಡೆಯಲು ಪ್ರಾರಂಭಿಸಿದಾಗ ಬೀಳುವ ಪೆಟ್ಟುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
- ಪವಿತ್ರ ಸಚಿನ್