ಮನು ಅಭಿನಯದ ‘ಮುಗಿಲ್ ಪೇಟೆ’ ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಯು/ಎ ಪತ್ರ ನೀಡಿದೆ. ನವೆಂಬರ್ 19 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಬಿಡುಗಡೆ ದಿನಾಂಕ ತಿಳಿಸಲು ಚಿತ್ರತಂಡ ಮಾಧ್ಯಮಗೋಷ್ಠಿ ಆಯೋಜಿಸಿತ್ತು.
‘ಮುಗಿಲ್ ಪೇಟೆ’ ನನ್ನ ಕನಸು. ಇಡೀ ಚಿತ್ರತಂಡದ ಶ್ರಮದ ಫಲವಾಗಿ ಇಂದು ನಮ್ಮ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ತೊಂಬತ್ತು ದಿನಗಳ ಕಾಲ ಬೆಂಗಳೂರು, ಚಿಕ್ಕಮಗಳೂರು, ಹಾಸನ, ಸಕಲೇಶಪುರ, ಕುಂದಾಪುರ, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರೀಕರಣ ನಡೆಸಿದ್ದೇವೆ. ಸಂಬಂಧಗಳಿಗೆ ಬೆಲೆ ಕೊಡುವ ಒಂದು ಕುಟುಂಬ ಮತ್ತು ಸಂಬಂಧಗಳನ್ನು ಕಡೆಗಾಣಿಸುವ ಮತ್ತೊಂದು ಕುಟುಂಬಗಳ ನಡುವೆ ಪ್ರೀತಿ ಮಾಡಿದಾಗ ಏನಾಗುತ್ತದೆ ಎನ್ನುವುದೇ ‘ಮುಗಿಲ್ ಪೇಟೆ’ ಚಿತ್ರದ ಕಥಾವಸ್ತು. ಇದು ಒಂದು ಜಾನರ್ ನ ಸಿನಿಮಾ ಅಲ್ಲ. ಕೌಟುಂಬಿಕ ಸನ್ನಿವೇಶ, ಪ್ರೀತಿ, ಸಾಹಸ, ಉತ್ತಮ ಹಾಸ್ಯ ಎಲ್ಲವನ್ನೂ ಒಳಗೊಂಡಿದೆ. ಈ ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ದೇಶಕ ಭರತ್ ಎಸ್ ನಾವುಂದ್.
ಚಿತ್ರದ ನಾಯಕ ಮನು ಮಾತನಾಡಿ “ಎಲ್ಲರ ಸಹಾಯದಿಂದ ನಮ್ಮ ಚಿತ್ರ ಬಿಡುಗಡೆ ಹಂತ ತಲುಪಿದೆ. ಟ್ರೇಲರ್ ಹಾಗೂ ಹಾಡು ಜನಪ್ರಿಯವಾಗಿದೆ. ಇದನ್ನು ನೋಡಿದವರು ನನ್ನ ಪಾತ್ರ ಮೆಚ್ಚಿಕೊಂಡಿದ್ದಾರೆ. ಚಿತ್ರಕ್ಕೂ ಜನಮನ್ನಣೆ ಸಿಗುವ ಭರವಸೆಯಿದೆ. ಸಾಧುಕೋಕಿಲ, ರಂಗಾಯಣ ರಘು, ತಾರಾ, ಅವಿನಾಶ್ ಅವರಂತಹ ಉತ್ತಮ ಕಲಾವಿದರೊಡನೆ ಅಭಿನಯಿಸಿದ್ದ ಅನುಭವ ನಿಜಕ್ಕೂ ಮರೆಯುವ ಹಾಗಿಲ್ಲ. ನಾಯಕಿ ಕಯಾದು ಅವರ ಅಭಿನಯ ಸೂಪರ್. ಚಿತ್ರದ ತುಣುಕು ಹಾಗೂ ಹಾಡುಗಳನ್ನು ಅಪ್ಪನಿಗೆ ತೋರಿಸಿದೆ. ಇಷ್ಟಪಟ್ಟರು. ಅವರ ಆಶೀರ್ವಾದ ಸದಾ ಇರುತ್ತದೆ” ಎಂದರು.
ನಾನು ಮೊದಲ ಬಾರಿಗೆ ಹದಿನೇಳು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರತಂಡದವರು ಇದನ್ನು ಲಿಮ್ಕ ದಾಖಲೆಗೆ ಕಳುಹಿಸುತ್ತೇವೆ ಎನ್ನುತ್ತಿದ್ದಾರೆ. ಸಂತೋಷ. ಆದರೆ ಯಾವ ಪಾತ್ರಗಳು ಅಂತ ಈಗ ಹೇಳುವುದಿಲ್ಲ. ಚಿತ್ರದಲ್ಲೇ ನೋಡಿ ಆನಂದಿಸಿ ಎಂದರು ಸಾಧುಕೋಕಿಲ.
ನಾನು ಮೊದಲು ಬಣ್ಣ ಹಚ್ಚಿದ್ದು ರವಿಚಂದ್ರನ್ ಅವರ ಮನೆಯಲ್ಲಿ. ಈಗ ಅವರ ಮಗನೊಡನೆ ನಟಿಸಿದ್ದೇನೆ. ಭಾಗವತರ ಪಾತ್ರ ನಿರ್ವಹಣೆ ಮಾಡಿದ್ದೇನೆ. ನಿಗದಿಯಂತೆ ಚಿತ್ರೀಕರಣ ನಡೆಸಿದ ನಿರ್ದೇಶಕರ ಕಾರ್ಯವೈಖರಿ ಶ್ಲಾಘನೀಯ. ಮನು ಸೇರಿದಂತೆ ಎಲ್ಲರ ಅಭಿನಯ ಅದ್ಭುತ ಎಂದು ರಂಗಾಯಣ ರಘು ತಿಳಿಸಿದರು. ಒಂದು ಚಿತ್ರ ಮಾಡಲು ಇಡೀ ತಂಡದ ಸಹಕಾರ ಅಗತ್ಯ. ಚಿತ್ರರಂಗದಲ್ಲಿ ನಾನು ಮಗು ಇದ್ದ ಹಾಗೆ. ಇದು ನನ್ನ ಮೊದಲ ನಿರ್ಮಾಣದ ಚಿತ್ರ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕಿ ರಕ್ಷ ವಿಜಯಕುಮಾರ್.
ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್, ಕಲಾವಿದರಾದ ಕಾಕ್ರೋಜ್ ಸುಧಿ, ಮೇಘಶ್ರೀ, ಅಪ್ಪಣ್ಣ ತಮ್ಮ ಅನುಭವವನ್ನು ಹಂಚಿಕೊಂಡರು. ಆನಂದ್ ಹಾಗೂ ಎಫೆಕ್ಟ್ ರಾಜನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಚಿತ್ರ ಉತ್ತಮವಾಗಿ ಮೂಡಿ ಬರಲು ಶ್ರಮಿಸುತ್ತಿರುವ ಮನು ಅವರ ಸಹೋದರ ವಿಕ್ರಂ ಅವರನ್ನು ಚಿತ್ರತಂಡದ ಪ್ರತಿಯೊಬ್ಬರು ವಿಶೇಷವಾಗಿ ಅಭಿನಂದಿಸಿದರು.