ಮುಂಬೈ, ಜ. 5: ಮುಂಬೈನ ದುಲೆ ಎಂಬಲ್ಲಿ 23 ವರ್ಷದ ವ್ಯಕ್ತಿಯೊಬ್ಬ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಪ್ರಸ್ತುತ ಕಾಲದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರು ಫೇಸ್ಬುಕ್ ಲೈವ್ ಬರುವುದು ಸಹಜ ಪ್ರಕ್ರಿಯೆಯಾಗಿ ಬಿಟ್ಟಿದೆ. ಅದೇ ರೀತಿಯಲ್ಲಿ ಈ ಯುವಕ ಕೂಡ ಫೇಸ್ಬುಕ್ ಲೈವ್ಗೆ ಬಂದಿದ್ದಾನೆ. ಅಳುತ್ತಲೇ ತನಗಾಗಿರುವ ಕಷ್ಟ, ನಷ್ಟ, ತನ್ನ ನೋವು, ತಾನೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಕಾರಣಗಳನ್ನು ಹೇಳಿದ್ದಾನೆ.
ಇಷ್ಟೆಲ್ಲಾ ಹೇಳುತ್ತಲೇ ಕುತ್ತಿಗೆಯನ್ನು ರೇಸರ್ನಿಂದ ಕತ್ತರಿಸಿಕೊಂಡು ಬಿಟ್ಟಿದ್ದಾನೆ. ಎಲ್ಲೋ ಕುಳಿತು ಈ ಯುವಕನ ಕಷ್ಟ ಕೇಳುತ್ತಿದ್ದವರು ಆತನ ಕಥೆ ಮುಗಿಯಿತು ಎಂದೇ ಭಾವಿಸಿ ಮರುಕಪಡುತ್ತಿದ್ದರು. ಆದರೆ ಅಲ್ಲಿ ಆಗಿದ್ದನ್ನು ಕೇಳಿದರೆ ದಂಗಾಗುತ್ತೀರಾ. ಇನ್ನೇನು ಅವನ ಉಸಿರು ನಿಂತು ಹೋಗುತ್ತದೆ ಎನ್ನುವಾಗಲೇ ಈ ಲೈವ್ ವೀಡಿಯೋವನ್ನು ಐರ್ಲ್ಯಾಂಡ್ನಲ್ಲಿನ ಫೇಸ್ಬುಕ್ ಮುಖ್ಯ ಕಚೇರಿಯ ಸಿಬ್ಬಂದಿ ನೋಡಿದ್ದಾರೆ. ಈ ಯುವಕನನ್ನು ಕಾಪಾಡಲು ಪ್ರಯತ್ನಿಸಿದ ಸಿಬ್ಬಂದಿ ಕೂಡಲೇ ಮುಂಬೈ ಸೈಬರ್ ಡಿಸಿಪಿ ರಶ್ಮಿ ಕರಂಡಿಕರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಮುಂಬೈನ ವ್ಯಕ್ತಿಯೊಬ್ಬ ಫೇಸ್ಬುಕ್ ಲೈವ್ಗೆ ಬಂದು ಆತ್ಮಹತ್ಯೆಗೆ ಮುಂದಾಗಲು ಹೊರಟಿದ್ದಾನೆ. ಆತನನ್ನು ಪತ್ತೆ ಹಚ್ಚಿ ರಕ್ಷಿಸುವಂತೆ, ಆತನ ಪೋಟೋ ಮತ್ತು ಲೈವ್ ವೀಡಿಯೋ ಲಿಂಕ್ ಶೇರ್ ಮಾಡಿದ್ದಾರೆ.
ತಕ್ಷಣವೇ ಮುಂಬೈನ ಸೈಬರ್ ಪೊಲೀಸರು, ಈ ಯುವಕನ ಲೊಕೇಷನ್ ಪತ್ತೆ ಹಚ್ಚಿದ್ದಾರೆ. ದುಲೆ ಪ್ರಾಂತ್ಯದಲ್ಲಿ ಆತನ ಮನೆ ಇರೋದನ್ನು ಪತ್ತೆ ಹಚ್ಚಿದ ಅವರು, ಹತ್ತೇ ನಿಮಿಷದಲ್ಲಿ ಅಲ್ಲಿಗೆ ತೆರಳಿದ್ದಾರೆ. ಅಷ್ಟರಲ್ಲೇ ಯುವಕ ಕತ್ತು ಕುಯ್ದುಕೊಂಡು, ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಆದರೆ ಉಸಿರಾಡುತ್ತಿದ್ದ ಆತನನ್ನು ಕೂಡಲೇ ಅಂಬ್ಯುಲೆನ್ಸ್ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಿನಲ್ಲಿ, ಫೇಸ್ಬುಕ್ ಲೈವ್ ಬಂದುದಕ್ಕೆ ಯುವಕನ ಪ್ರಾಣ ಉಳಿದಿದೆ. 10-15 ನಿಮಿಷದಲ್ಲಿಯೇ ದೂರದ ದೇಶದಿಂದ ಮುಂಬೈ ನಿವಾಸಿಯೊಬ್ಬನ ಪ್ರಾಣ ಉಳಿದಿರುವುದು ಆಶ್ಚರ್ಯವೇ ಸರಿ.